OpenAI

ಹೊಣೆಗಾರ AI ಮೂಲಸೌಕರ್ಯಕ್ಕೆ ಹೊಸ ಮಾನದಂಡ

ನಾವು ನಿರ್ಮಾಣ ಮಾಡುವ ಸ್ಥಳಗಳ ಸಮುದಾಯಗಳಿಗೆ ಹೊಸ ಬದ್ಧತೆಗಳು ಮತ್ತು ಇನ್ನಷ್ಟು ಅಮೆರಿಕನ್ನರು ಇದರ ಪ್ರಯೋಜನಗಳಲ್ಲಿ ಪಾಲು ಪಡೆಯಲು ನೆರವಾಗುವ ನೀತಿ ಪ್ರಸ್ತಾಪಗಳು.

ಲೋಡ್ ಆಗುತ್ತಿದೆ…

ಜನರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಹೆಚ್ಚಿನ ಶಕ್ತಿ ನೀಡುವುದು AI ನೀಡುವ ಭರವಸೆ. ಹೊಸ ಕೌಶಲ ಕಲಿಯಲು, ಉದ್ಯಮ ಕಟ್ಟಲು ಅಥವಾ ಹಿಂದೆ ಪರಿಹರಿಸಲಾಗದಿದ್ದ ಸಮಸ್ಯೆಯನ್ನು ಬಗೆಹರಿಸಲು ಅದು ನೆರವಾಗಬಲ್ಲದು. ಅಮೆರಿಕದಲ್ಲಿ ಗಣನಾ ಮೂಲಸೌಕರ್ಯದ ಸಾಮರ್ಥ್ಯ ಹೆಚ್ಚಿಸುವುದರಿಂದ AI ಒದಗಿಸುವ ವೆಚ್ಚ ಕಡಿಮೆಯಾಗಬಹುದು, ಈ ಸಾಧನಗಳು ಹೆಚ್ಚು ಜನರಿಗೆ ಲಭ್ಯವಾಗಬಹುದು ಮತ್ತು ಈ ತಂತ್ರಜ್ಞಾನದಲ್ಲಿ ಅಮೆರಿಕ ಮುಂಚೂಣಿಯಲ್ಲಿ ಉಳಿಯಬಹುದು.

ಈ ಮೂಲಸೌಕರ್ಯ ನೆಲೆಗೊಳ್ಳುವ ಸಮುದಾಯಗಳಿಗೂ ತಮ್ಮ ಭವಿಷ್ಯ ರೂಪಿಸುವಲ್ಲಿ ಸ್ಪಷ್ಟವಾಗಿ ಮಾತು ಹೇಳುವ ಅವಕಾಶ ಇರಬೇಕು. ಆವರಣದ ಅಭಿವೃದ್ಧಿಯ ಬಗ್ಗೆ ನಿವಾಸಿಗಳು ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಪಡೆಯುವಂತಿರಬೇಕು. ಅದರ ವಿದ್ಯುತ್ ವೆಚ್ಚ ಭರಿಸುವ ಹೊಣೆಯನ್ನು ಅಭಿವೃದ್ಧಿಪಡಿಸುವವರ ಮೇಲೆ ಹೊರಿಸುವಂತೆಯೂ, ಸೃಷ್ಟಿಯಾಗುವ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳಲ್ಲಿ ಪಾಲು ಪಡೆಯುವಂತೆಯೂ ಇರಬೇಕು. AI ಪ್ರಯೋಜನಗಳು ವ್ಯಾಪಕವಾಗಿ ಹಂಚಿಕೆಯಾಗುತ್ತವೆಯೇ ಎಂಬುದಕ್ಕೆ, ನಾವು ಈ ಆವರಣಗಳನ್ನು ಹೇಗೆ ನಿರ್ಮಿಸುತ್ತೇವೆ ಎನ್ನುವುದು ಮೊದಲ ಪರೀಕ್ಷೆಗಳಲ್ಲಿ ಒಂದು.

ಇಂದು ನಾವು ನಮ್ಮ ರಾಷ್ಟ್ರೀಯ ಸಮುದಾಯ ಒಪ್ಪಂದ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಮತ್ತು ಗಣನಾ ಆವರಣ ನೀತಿ ರೂಪರೇಖೆ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಪ್ರಕಟಿಸುತ್ತಿದ್ದೇವೆ. ಭವಿಷ್ಯದಲ್ಲಿ ನಾವು ಒಡೆತನ ಹೊಂದಿ ನಿರ್ವಹಿಸುವ ಆವರಣಗಳಲ್ಲಿ ಸಮುದಾಯಗಳು OpenAI ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಈ ಒಪ್ಪಂದ ವಿವರಿಸುತ್ತದೆ. ಗಣನಾ ಆವರಣಗಳ ಅಭಿವೃದ್ಧಿಯಲ್ಲಿ ಸಮುದಾಯಗಳ ಮಾತಿಗೆ ನಿಜವಾದ ಮನ್ನಣೆ ಸಿಗಲು, ಕುಟುಂಬಗಳ ಮೇಲೆ ಹೊಸ ವೆಚ್ಚಗಳು ಬೀಳದಿರಲು ಮತ್ತು AI ಆರ್ಥಿಕ ಲಾಭಗಳು ವ್ಯಾಪಕವಾಗಿ ಹಂಚಿಕೆಯಾಗಲು ನೆರವಾಗುವ ನೀತಿಗಳನ್ನು ಈ ರೂಪರೇಖೆ ಪ್ರಸ್ತಾಪಿಸುತ್ತದೆ.

ಜನವರಿಯಲ್ಲಿ ಆರಂಭಿಸಿದ ಕೆಲಸವನ್ನು ಇದು ಮುಂದುವರಿಸುತ್ತದೆ. ಆಗ, ನಮ್ಮ ಇಂಧನ ವೆಚ್ಚವನ್ನು ನಾವೇ ಭರಿಸಲು ಮತ್ತು ಸ್ಥಳೀಯ ಆದ್ಯತೆಗಳಿಗೆ ತಕ್ಕ ಯೋಜನೆಗಳನ್ನು ರೂಪಿಸಲು ನಮ್ಮ ಸ್ಟಾರ್‌ಗೇಟ್ ಸಮುದಾಯ ಬದ್ಧತೆಗಳನ್ನು ಘೋಷಿಸಿದ್ದೆವು. ಬಳಿಕ ಜಾರ್ಜಿಯಾ ಮತ್ತು ಓಹಯೋಗಳಲ್ಲಿ ಇಂಧನ ವೆಚ್ಚ, ನೀರಿನ ಬಳಕೆ, ಸ್ಥಳೀಯ ಹೂಡಿಕೆ ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ನಿರ್ದಿಷ್ಟ ಬದ್ಧತೆಗಳನ್ನು ಘೋಷಿಸಿದೆವು. ಈ ಕೆಲಸದುದ್ದಕ್ಕೂ, ಸಮುದಾಯಗಳಿಗೆ ಯಾವುದು ಮುಖ್ಯ ಎಂಬ ಬಗ್ಗೆ ನಿವಾಸಿಗಳು, ಸ್ಥಳೀಯ ನಾಯಕರು, ಶಾಲೆಗಳು ಮತ್ತು ಉದ್ಯಮಗಳ ಮಾತುಗಳನ್ನು ಕೇಳಿದ್ದೇವೆ. ಇಂದಿನ ಘೋಷಣೆಯು ಆ ನಿರಂತರ ಪ್ರಯತ್ನದ ಮುಂದಿನ ಹೆಜ್ಜೆ.

ನಾವು ನಿರ್ಮಾಣ ಕೈಗೊಳ್ಳುವ ಸ್ಥಳಗಳ ಸಮುದಾಯಗಳಿಗೆ ನಮ್ಮ ಬದ್ಧತೆಗಳು

ಭವಿಷ್ಯದಲ್ಲಿ OpenAI ಒಡೆತನ ಹೊಂದಿ ನಿರ್ವಹಿಸುವ ಪ್ರತಿಯೊಂದು ಗಣನಾ ಆವರಣಕ್ಕೂ ತನ್ನದೇ ಸ್ಥಳೀಯ ಒಪ್ಪಂದವಿರುತ್ತದೆ. ನಿವಾಸಿಗಳ ಸಲಹೆಗಳು ಯೋಜನೆಗಳನ್ನು ರೂಪಿಸಲು ನೆರವಾಗುವಂತೆ ಆರಂಭದಲ್ಲೇ ಅವರನ್ನು ಒಳಗೊಳ್ಳುತ್ತೇವೆ. ಆವರಣ ಕಾರ್ಯನಿರ್ವಹಿಸುವವರೆಗೂ ಸ್ಥಳೀಯ ಸಂಪರ್ಕ ವ್ಯಕ್ತಿಯನ್ನು ಒದಗಿಸುತ್ತೇವೆ. ನಮ್ಮ ಪ್ರಗತಿ ಕುರಿತು ಪ್ರತಿ ವರ್ಷ ಸಾರ್ವಜನಿಕ ವರದಿ ನೀಡುತ್ತೇವೆ. ಪ್ರತಿ ಒಪ್ಪಂದವೂ ಸ್ಥಳೀಯ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಈ ಸಾಮಾನ್ಯ ಬದ್ಧತೆಗಳನ್ನು ಒಳಗೊಂಡಿರುತ್ತದೆ:

  • ನಮ್ಮ ಇಂಧನ ಮತ್ತು ಮೂಲಸೌಕರ್ಯ ವೆಚ್ಚವನ್ನು ನಾವೇ ಭರಿಸುತ್ತೇವೆ. ನಾವು ಬಳಸುವ ವಿದ್ಯುತ್ ಮತ್ತು ನಮಗೆ ಸೇವೆ ಒದಗಿಸಲು ಬೇಕಾದ ಮೂಲಸೌಕರ್ಯದ ಸಂಪೂರ್ಣ ವೆಚ್ಚವನ್ನು ಭರಿಸುತ್ತೇವೆ. ದೊಡ್ಡ ವೆಚ್ಚಗಳನ್ನು ಮಾಡುವ ಮುನ್ನ ಹಣಕಾಸಿನ ಖಾತರಿಗಳನ್ನು ಒದಗಿಸುತ್ತೇವೆ. ಹೀಗಾಗಿ ಯೋಜನೆ ವಿಳಂಬವಾದರೂ, ಸಣ್ಣದಾದರೂ ಅಥವಾ ರದ್ದಾದರೂ ಇತರ ಗ್ರಾಹಕರಿಗೆ ರಕ್ಷಣೆ ಇರುತ್ತದೆ.

  • ಸ್ಥಳೀಯ ಸಂಪನ್ಮೂಲಗಳನ್ನು ರಕ್ಷಿಸಿ, ನಮ್ಮ ಪ್ರಭಾವದ ಕುರಿತು ವರದಿ ನೀಡುತ್ತೇವೆ. ಪ್ರತಿ ಆವರಣಕ್ಕೂ ನೀರಿನ ಬಳಕೆ ಯೋಜನೆ ರೂಪಿಸುತ್ತೇವೆ. ನೀರನ್ನು ಮರುಬಳಸುವ ಮುಚ್ಚಿದ ವ್ಯವಸ್ಥೆ ಅಥವಾ ಕಡಿಮೆ ನೀರು ಬಳಸುವ ತಂಪುಗೊಳಿಸುವಿಕೆಗೆ ಆದ್ಯತೆ ನೀಡುತ್ತೇವೆ. ಪ್ರತಿ ಆವರಣದ ನೀರು ಮತ್ತು ವಿದ್ಯುತ್ ಬಳಕೆಯನ್ನು ಪ್ರಕಟಿಸುತ್ತೇವೆ. ಕಾರ್ಯಾಚರಣೆ ಆರಂಭಿಸುವ ಮೊದಲು ಮತ್ತು ಬಳಿಕ ಪ್ರತಿ ವರ್ಷ ನಿರ್ಮಾಣ ಯೋಜನೆಗಳನ್ನೂ ಸ್ವತಂತ್ರ ಶಬ್ದ ಅಧ್ಯಯನಗಳನ್ನೂ ಪ್ರಕಟಿಸುತ್ತೇವೆ. ಸಾರ್ವಜನಿಕ ಅಧಿಕಾರಿಗಳೊಂದಿಗೆ ಗೌಪ್ಯತಾ ಒಪ್ಪಂದಗಳನ್ನು ಬಳಸುವುದಿಲ್ಲ; ಸಮರ್ಥನೀಯ ಭದ್ರತಾ ಮಾಹಿತಿ, ವ್ಯಾಪಾರ ರಹಸ್ಯಗಳು, ಸ್ವಾಮ್ಯದ ಅಥವಾ ಸ್ಪರ್ಧಾತ್ಮಕವಾಗಿ ಸೂಕ್ಷ್ಮ ಮಾಹಿತಿಗೆ ಮಾತ್ರ ಸೀಮಿತ ರಕ್ಷಣೆ ನೀಡುತ್ತೇವೆ.

  • ಸ್ಥಳೀಯ ಕಾರ್ಮಿಕರು ಮತ್ತು ಉದ್ಯಮಗಳಿಗೆ ಅವಕಾಶ ಸೃಷ್ಟಿಸುತ್ತೇವೆ. ಸೃಷ್ಟಿಸುವ ನಿರೀಕ್ಷೆಯಿರುವ ಉದ್ಯೋಗಗಳ ವಿವರ ಪ್ರಕಟಿಸುತ್ತೇವೆ. ಅವುಗಳಿಗೆ ನಿವಾಸಿಗಳನ್ನು ಸಜ್ಜುಗೊಳಿಸಲು ಕಾರ್ಮಿಕ ಸಂಘಗಳು ಮತ್ತು ತರಬೇತಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತೇವೆ. ನೇಮಕಾತಿ ಮತ್ತು ಶಿಶಿಕ್ಷು ತರಬೇತಿ ಕುರಿತು ವಾರ್ಷಿಕ ವರದಿ ನೀಡುತ್ತೇವೆ. ನಿವಾಸಿಗಳ ನೆರವಿನಿಂದ ಆಯ್ಕೆ ಮಾಡಿದ ಆದ್ಯತೆಗಳಿಗಾಗಿ ನಿರಂತರ ಹೂಡಿಕೆಯನ್ನೂ ಮಾಡುತ್ತೇವೆ.

ಈ ಆದ್ಯತೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಜಾರ್ಜಿಯಾದ ಎಫಿಂಗ್ಹ್ಯಾಮ್ ಕೌಂಟಿಯ ಎಲ್ಲ 14,000 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉಚಿತ ಊಟ ನೀಡಲು 48 ಲಕ್ಷ ಡಾಲರ್ ಅನುದಾನವನ್ನು ರೂಪಿಸುವಲ್ಲಿ ನಿವಾಸಿಗಳು ನೆರವಾದರು. ಓಹಯೋದ ಪೈಕ್ ಕೌಂಟಿಯಲ್ಲಿ ಕುಟುಂಬಗಳು ಮಕ್ಕಳ ಆರೈಕೆಯನ್ನು ಆದ್ಯತೆಯಾಗಿ ಗುರುತಿಸಿದವು. ಇದರಿಂದಾಗಿ OpenAI ಮತ್ತು ಎಸ್‌ಬಿ ಎನರ್ಜಿ ಜಂಟಿಯಾಗಿ 60 ಲಕ್ಷ ಡಾಲರ್ ನೀಡಲು ಬದ್ಧವಾದವು.

ಜವಾಬ್ದಾರಿಯುತ ಅಭಿವೃದ್ಧಿಗಾಗಿ ನೀತಿ ರೂಪರೇಖೆ

ತಮ್ಮ ಸಮುದಾಯದಲ್ಲಿ ಯಾರು ಆವರಣ ನಿರ್ಮಿಸಿದರೂ ಕುಟುಂಬಗಳು ಮೂಲಭೂತ ರಕ್ಷಣೆಗಳನ್ನು ನೆಚ್ಚಿಕೊಳ್ಳುವಂತಿರಬೇಕು. ಕಂಪನಿಗಳ ಸ್ವಯಂಪ್ರೇರಿತ ಬದ್ಧತೆಗಳು ಮುಖ್ಯವಾದ ಮೊದಲ ಹೆಜ್ಜೆ. ಆದರೆ ನಮ್ಮ ರೂಪರೇಖೆ ಅದಕ್ಕೂ ಮುಂದೆ ಸಾಗುತ್ತದೆ—ಈ ವಲಯದ ನಿರ್ಮಾಣಕ್ಕೆ ಸ್ಪಷ್ಟ ನಿಯಮಗಳನ್ನು ರೂಪಿಸುವಂತೆ ಫೆಡರಲ್, ರಾಜ್ಯ ಮತ್ತು ಸ್ಥಳೀಯ ನೀತಿ ನಿರೂಪಕರನ್ನು ಕೋರುತ್ತದೆ. ಸಮುದಾಯಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಕಂಪನಿಗಳ ನಡುವೆ ನಂಬಿಕೆ ಮತ್ತು ವಿಶ್ವಾಸ ಮೂಡಿಸಲು ಹೊಸ ನೀತಿ ಅಗತ್ಯ. ಜವಾಬ್ದಾರಿಯುತ ಹೂಡಿಕೆಯನ್ನು ಉತ್ತೇಜಿಸಲು, ನಿವಾಸಿಗಳನ್ನು ರಕ್ಷಿಸಲು ಮತ್ತು AI ಮೂಲಸೌಕರ್ಯದ ಪ್ರಯೋಜನಗಳು ವ್ಯಾಪಕವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಲು ಶಾಸಕರು ನಿಯಮ ರೂಪಿಸಬೇಕು.

ವಿದ್ಯುತ್ ವೆಚ್ಚವನ್ನು ಯಾರು ಭರಿಸುತ್ತಾರೆ ಎಂಬುದರಿಂದ ಇದು ಆರಂಭವಾಗುತ್ತದೆ. ದೊಡ್ಡ ವಿದ್ಯುತ್ ಗ್ರಾಹಕರು ವಿದ್ಯುತ್ ಜಾಲಕ್ಕೆ ಉಂಟುಮಾಡುವ ಹೆಚ್ಚುವರಿ ವೆಚ್ಚವನ್ನು ಅವರೇ ಭರಿಸುವಂತೆ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು ಕಡ್ಡಾಯಗೊಳಿಸಬೇಕು. ಯೋಜನೆ ಕೈಗೂಡದಿದ್ದರೆ ಇತರ ಗ್ರಾಹಕರನ್ನು ರಕ್ಷಿಸಬೇಕು. ವಿದ್ಯುತ್ ಕೊರತೆಯಿದ್ದಾಗ ಸುರಕ್ಷಿತವಾಗಿ ತಮ್ಮ ವಿದ್ಯುತ್ ಬೇಡಿಕೆಯನ್ನು ಕಡಿಮೆ ಮಾಡಬಲ್ಲ ಆವರಣಗಳಿಗೆ ವಿದ್ಯುತ್ ಜಾಲದ ಸಂಪರ್ಕ ಪಡೆಯುವುದನ್ನು ವಿದ್ಯುತ್ ಸಂಸ್ಥೆಗಳು ಸುಲಭಗೊಳಿಸಬೇಕು. ಉದಾಹರಣೆಗೆ, ಎಫಿಂಗ್ಹ್ಯಾಮ್ ಕೌಂಟಿಯಲ್ಲಿ ಯೋಜಿಸಿರುವ ನಮ್ಮ ಆವರಣಕ್ಕಾಗಿ ಜಾರ್ಜಿಯಾ ಪವರ್ ಜೊತೆಗಿನ ಒಪ್ಪಂದವು, ಬೇಡಿಕೆ ಹೆಚ್ಚಿರುವಾಗ ನಮಗೆ ಪೂರೈಸುವ ವಿದ್ಯುತ್ ಅನ್ನು 1,000 ಮೆಗಾವಾಟ್‌ಗಳಷ್ಟು ಕಡಿತಗೊಳಿಸಲು ಆ ಸಂಸ್ಥೆಗೆ ಅವಕಾಶ ನೀಡುತ್ತದೆ. ವಿದ್ಯುತ್ ಪ್ರಸರಣ ವ್ಯವಸ್ಥೆಯ ಉನ್ನತೀಕರಣವನ್ನು ಚುರುಕುಗೊಳಿಸಿ, ಸ್ವಚ್ಛ ವಿದ್ಯುತ್‌ಗೆ ತೆರಿಗೆ ಪ್ರೋತ್ಸಾಹಗಳನ್ನು ಮರುಸ್ಥಾಪಿಸಿ ವಿಸ್ತರಿಸುವ ಮೂಲಕ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಅಮೆರಿಕದ ಕಾಂಗ್ರೆಸ್ ನೆರವಾಗಬಹುದು.

ಅಭಿವೃದ್ಧಿಪಡಿಸುವವರನ್ನು ಹೊಣೆಗಾರರನ್ನಾಗಿಸುವ ಮಾರ್ಗವೂ ಸಮುದಾಯಗಳಿಗೆ ಬೇಕು. ನೀರು, ಇಂಧನ, ಶಬ್ದ ಮತ್ತು ನೇಮಕಾತಿ ಕುರಿತು ಸಾರ್ವಜನಿಕ ವರದಿಗಳನ್ನು ನೀಡಬೇಕೆಂದು ರೂಪರೇಖೆ ಹೇಳುತ್ತದೆ. ಸಾರ್ವಜನಿಕ ಅಧಿಕಾರಿಗಳಿಂದ ಗೌಪ್ಯತಾ ಒಪ್ಪಂದಗಳಿಗೆ ಸಹಿ ಪಡೆಯಲು ಅಭಿವೃದ್ಧಿಪಡಿಸುವವರಿಗೆ ಅವಕಾಶವಿರುವ ಸಂದರ್ಭಗಳನ್ನು ಕಟ್ಟುನಿಟ್ಟಾಗಿ ಸೀಮಿತಗೊಳಿಸಬೇಕೆಂದೂ ಸೂಚಿಸುತ್ತದೆ. ರಾಜ್ಯ ಅಥವಾ ಸ್ಥಳೀಯ ಸರ್ಕಾರಗಳು ತೆರಿಗೆ ಪ್ರೋತ್ಸಾಹ ನೀಡಿದಾಗ ಅದರ ಷರತ್ತುಗಳು ಸಾರ್ವಜನಿಕವಾಗಿರಬೇಕು. ಅಳೆಯಬಹುದಾದ ಬದ್ಧತೆಗಳಿರಬೇಕು. ಅಭಿವೃದ್ಧಿಪಡಿಸುವವರು ಅವನ್ನು ಈಡೇರಿಸದಿದ್ದರೆ ನೀಡಿದ ಸೌಲಭ್ಯಗಳನ್ನು ಹಿಂಪಡೆಯುವ ಮಾರ್ಗವೂ ಇರಬೇಕು.

ಕೊನೆಯದಾಗಿ, ಹೆಚ್ಚಿನ ಕೆಲಸ ಸ್ಥಳೀಯವಾಗಿಯೇ ಉಳಿಯಲು ರೂಪರೇಖೆ ಪ್ರಾಯೋಗಿಕ ಮಾರ್ಗಗಳನ್ನು ಸೂಚಿಸುತ್ತದೆ. ಇದರಿಂದ ಗಣನಾ ಆವರಣಗಳು ಸ್ಥಳೀಯ ಕಾರ್ಮಿಕರು ಮತ್ತು ಉದ್ಯಮಗಳಿಗೆ ಬೆಂಬಲ ನೀಡುತ್ತವೆ. ಸ್ಥಳೀಯ ಪೂರೈಕೆದಾರರು ಗುತ್ತಿಗೆಗಳಿಗಾಗಿ ಸ್ಪರ್ಧಿಸಲು ಸಾಕಷ್ಟು ಸಮಯ ಸಿಗುವಂತೆ ಅಭಿವೃದ್ಧಿಪಡಿಸುವವರು ಖರೀದಿ ಯೋಜನೆಗಳನ್ನು ಮುಂಚಿತವಾಗಿ ಹಂಚಿಕೊಳ್ಳಬಹುದು. ಉದ್ಯೋಗದಾತರು, ಕಟ್ಟಡ ಕಾರ್ಮಿಕ ಸಂಘಗಳು ಮತ್ತು ಸಮುದಾಯ ಕಾಲೇಜುಗಳು ನೇಮಕಾತಿ ಅಂದಾಜುಗಳ ಆಧಾರದಲ್ಲಿ ಲಭ್ಯವಾಗಲಿರುವ ಉದ್ಯೋಗಗಳಿಗೆ ನಿವಾಸಿಗಳನ್ನು ತರಬೇತುಗೊಳಿಸಬಹುದು. ನಿರ್ಮಾಣದ ಸಮಯದ ವಿದ್ಯುತ್ ಕೆಲಸದಿಂದ ಹಿಡಿದು, ಬಳಿಕ ಹಲವು ವರ್ಷಗಳವರೆಗೆ ವಿದ್ಯುತ್ ಮತ್ತು ತಂಪುಗೊಳಿಸುವ ವ್ಯವಸ್ಥೆಗಳ ನಿರ್ವಹಣೆಯವರೆಗಿನ ಕೆಲಸಗಳಿಗೆ ಇದು ಅನ್ವಯಿಸುತ್ತದೆ.

ಸಮುದಾಯದಿಂದಲೇ ಆರಂಭವಾಗುವ ನಿರ್ಮಾಣ

ಜಾಗತಿಕವಾಗಿ ಸ್ಪರ್ಧಿಸಲು ಅಮೆರಿಕಕ್ಕೆ ನೆರವಾಗುವ ಹೂಡಿಕೆಗಳು ಸ್ಥಳೀಯವಾಗಿ ಸಮುದಾಯಗಳು ಸಮೃದ್ಧವಾಗಲೂ ನೆರವಾಗಬಹುದು. ಯೋಜನೆಗಳನ್ನು ಇನ್ನೂ ಬದಲಿಸಬಹುದಾದ ಹಂತದಲ್ಲೇ ನಿವಾಸಿಗಳಿಗೆ ಮಾತು ಹೇಳುವ ಅವಕಾಶ ನೀಡುವುದು ಇದರ ಆರಂಭ. ಬದ್ಧತೆಗಳನ್ನು ಈಡೇರಿಸುವಂತೆ ಅಭಿವೃದ್ಧಿಪಡಿಸುವವರನ್ನು ಹೊಣೆಗಾರರನ್ನಾಗಿಸುವ ಮಾರ್ಗವೂ ಅವರಿಗೆ ಇರಬೇಕು. ನಾವು ಒಡೆತನ ಹೊಂದಿ ನಿರ್ವಹಿಸುವ ಆವರಣಗಳಲ್ಲಿ ಇದಕ್ಕೇ ಬದ್ಧರಾಗಿದ್ದೇವೆ. ದೇಶದಾದ್ಯಂತ AI ಮೂಲಸೌಕರ್ಯವನ್ನು ಎಲ್ಲೇ ನಿರ್ಮಿಸಿದರೂ ಜನರು ಇದನ್ನು ನೆಚ್ಚಿಕೊಳ್ಳುವಂತಿರಬೇಕು ಎಂಬುದು ನಮ್ಮ ನಂಬಿಕೆ.