OpenAI

ಅಕ್ಟೋಬರ್ 29, 2026

ಸುರಕ್ಷತೆ

ಹೆಚ್ಚು ಸಮರ್ಥ ಮತ್ತು ಉಪಯುಕ್ತ AI ಗಾಗಿ ಪರಿಷ್ಕೃತ ಮಾಡೆಲ್ ಸ್ಪೆಕ್

ಲೋಡ್ ಆಗುತ್ತಿದೆ…

ನಮ್ಮ ಮಾಡೆಲ್‌ಗಳು ಹೆಚ್ಚು ಬುದ್ಧಿವಂತವಾಗುತ್ತಾ, ಜಗತ್ತಿನಲ್ಲಿ ಹೆಚ್ಚಿನ ಪರಿಣಾಮ ಬೀರುವ ಕ್ರಮಗಳನ್ನು ಕೈಗೊಳ್ಳುತ್ತಿವೆ. ಹೀಗಾಗಿ, ಅವು ತಮಗೆ ಸಿಗುವ ನಿರ್ದಿಷ್ಟ ಸೂಚನೆಗಳನ್ನು ಅರ್ಥೈಸುವುದಕ್ಕಷ್ಟೇ ಸೀಮಿತವಾಗದಿರುವುದು ಇನ್ನಷ್ಟು ಮುಖ್ಯವಾಗುತ್ತಿದೆ. ಮಾಡೆಲ್‌ಗಳು ಮಾನವರ ಉದ್ದೇಶಗಳು ಮತ್ತು ಮೌಲ್ಯಗಳನ್ನೂ ಅರ್ಥಮಾಡಿಕೊಳ್ಳಬೇಕು. ಆಗ, ಸೂಚನೆಗಳು ಸ್ಪಷ್ಟವಾಗಿ ತಿಳಿಸದ ಸಂದರ್ಭಗಳಲ್ಲೂ ಮಾನವರ ಆಶಯ ಮತ್ತು ಮೇಲ್ವಿಚಾರಣೆಗೆ ಬದ್ಧವಾಗಿದ್ದು, ವಿವೇಕಯುತ ನಿರ್ಧಾರಗಳನ್ನು ಕೈಗೊಳ್ಳಬಲ್ಲವು.

ನಮ್ಮ ಮಾಡೆಲ್‌ಗಳು ಹೇಗೆ ವರ್ತಿಸಬೇಕೆಂದು ನಾವು ಬಯಸುತ್ತೇವೆ ಎಂಬುದನ್ನು ಸಾರ್ವಜನಿಕವಾಗಿ ವಿವರಿಸುವ ಮಾಡೆಲ್ ಸ್ಪೆಕ್⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಅನ್ನು ಇಂದು ಪರಿಷ್ಕರಿಸುತ್ತಿದ್ದೇವೆ. ಈ ಪರಿಷ್ಕರಣೆಯಲ್ಲಿ ಮಾರ್ಗದರ್ಶನವನ್ನು ಐದು ಮೂಲ ಮೌಲ್ಯಗಳ ಆಧಾರದಲ್ಲಿ ಮರುಸಂಘಟಿಸಲಾಗಿದೆ: ಮಾನವರ ಆಶಯಕ್ಕೆ ಬದ್ಧತೆ, ಹಾನಿ ತಗ್ಗಿಸುವುದು, ಪ್ರಾಮಾಣಿಕತೆ ಮತ್ತು ಪಾರದರ್ಶಕತೆ, ಮಾನವರ ಸ್ವನಿರ್ಧಾರ ಸಾಮರ್ಥ್ಯ ಮತ್ತು ಕಾಳಜಿ. ಇದು ಮೌಲ್ಯಗಳೊಂದಿಗೆ ಹೊಂದಾಣಿಕೆ ಕುರಿತ ನಮ್ಮ ಕೆಲಸದ ಒಂದು ಗುರಿಯನ್ನು ಪ್ರತಿಬಿಂಬಿಸುತ್ತದೆ: ಮಾಡೆಲ್‌ಗಳು ಮಾನವರ ಆಶಯಕ್ಕೆ ಬದ್ಧವಾಗಿದ್ದು, ಅಪರಿಚಿತ ಸಂದರ್ಭಗಳಲ್ಲೂ ಮಾನವ ಮೌಲ್ಯಗಳನ್ನು ಅರ್ಥಮಾಡಿಕೊಂಡು ಅನ್ವಯಿಸುವುದು. ಈ ಪರಿಷ್ಕರಣೆ ಈಗಿರುವ ತತ್ವಗಳನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸುತ್ತದೆ. ಜೊತೆಗೆ ಸಂದರ್ಭ, ಮೇಲ್ವಿಚಾರಣೆ ಮತ್ತು ಸ್ವನಿರ್ಧಾರ ಸಾಮರ್ಥ್ಯದ ಬಗ್ಗೆ ಮಾರ್ಗದರ್ಶನವನ್ನು ಸೇರಿಸುತ್ತದೆ, ಕೆಲವು ಪೂರ್ವನಿಯೋಜಿತ ವರ್ತನೆಗಳನ್ನು ಬದಲಿಸುತ್ತದೆ ಮತ್ತು ಶೈಲಿಗೆ ಸಂಬಂಧಿಸಿದ ವಿವರವಾದ ಮಾರ್ಗದರ್ಶನದ ಬಹುಭಾಗವನ್ನು ತೆಗೆದುಹಾಕುತ್ತದೆ.

ಮೂಲ ಮೌಲ್ಯಗಳ ಆಧಾರದಲ್ಲಿ ಸ್ಪೆಕ್‌ನ ಸಂಘಟನೆ

ಮೇಲಿನ ಐದು ಮೌಲ್ಯಗಳು ಮಾಡೆಲ್ ಸ್ಪೆಕ್‌ನ ಉದ್ದಕ್ಕೂ ಈಗಾಗಲೇ ಕಾಣುವ ವಿಶಾಲ ಬದ್ಧತೆಗಳನ್ನು ಸ್ಪಷ್ಟಪಡಿಸುತ್ತವೆ: ಮಾನವರ ಉದ್ದೇಶಗಳಿಗೆ ನೆರವಾಗುವುದು, ಸತ್ಯವಂತರಾಗಿರುವುದು, ಹಾನಿ ತಗ್ಗಿಸುವುದು, ಸ್ವಂತ ಅಭಿಪ್ರಾಯ ರೂಪಿಸಿಕೊಳ್ಳುವ ಜನರ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಅವರ ಪರಿಸ್ಥಿತಿಗಳನ್ನು ಗಂಭೀರವಾಗಿ ಪರಿಗಣಿಸುವುದು. ಈ ಬದ್ಧತೆಗಳನ್ನು ಒಟ್ಟುಗೂಡಿಸುವುದರಿಂದ, ಮಾಡೆಲ್‌ಗಳು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ಸ್ಪೆಕ್ ಏಕೆ ಹೇಳುತ್ತದೆ ಎಂಬುದನ್ನು ವಿವರಿಸಲು ಸಹಾಯವಾಗುತ್ತದೆ. ಅಲ್ಲದೆ, ಈ ಬದ್ಧತೆಗಳು ಸಂಪೂರ್ಣವಾಗಿ ವ್ಯಕ್ತವಾಗದ ಕಡೆಗಳಲ್ಲಿ ಇನ್ನಷ್ಟು ಸ್ಪಷ್ಟ ಮಾರ್ಗದರ್ಶನ ರೂಪಿಸಲು ನೆರವಾಗುತ್ತದೆ. ಸಂಶೋಧನೆ, ಮಾಡೆಲ್‌ಗಳನ್ನು ಬಳಕೆಗೆ ತಂದ ಅನುಭವ, ಸ್ಪೆಕ್ ಮತ್ತು ಮಾಡೆಲ್‌ನ ವರ್ತನೆಯ ಕುರಿತು ಸಾರ್ವಜನಿಕ ಪ್ರತಿಕ್ರಿಯೆ, ಬಳಕೆದಾರರು ಮತ್ತು ಹೊರಗಿನ ತಜ್ಞರೊಂದಿಗಿನ ಚರ್ಚೆಗಳ ಮೂಲಕ ಸ್ಪೆಕ್ ಅನ್ನು ಸುಧಾರಿಸುವ ನಮ್ಮ ಕೆಲಸದಲ್ಲಿ ಈ ಪರಿಷ್ಕರಣೆ ಮತ್ತೊಂದು ಹೆಜ್ಜೆಯಾಗಿದೆ.

ವಿಭಿನ್ನ ಅಗತ್ಯಗಳು, ಮೌಲ್ಯಗಳು ಮತ್ತು ಭವಿಷ್ಯದ ಆಶಯಗಳನ್ನು ಹೊಂದಿರುವ ಜಗತ್ತಿನ ಜನರಿಗೆ AI ಪ್ರಯೋಜನವಾಗಬೇಕೆಂದು ನಾವು ಬಯಸುತ್ತೇವೆ.

ಮಾನವರ ಆಶಯಕ್ಕೆ ಬದ್ಧತೆ ಈ ವಿಧಾನದ ಅಡಿಪಾಯ: ಜನರಿಗೆ ಯಾವುದು ಮುಖ್ಯ ಎಂಬುದನ್ನು ಅರಿತು, ಅದನ್ನು ಸಾಧಿಸಲು ಅವರಿಗೆ ನೆರವಾಗುವುದು. OpenAI ಸ್ಪೆಕ್ ಅನ್ನು ಬರೆಯುತ್ತದೆ, ಮಿತಿಗಳನ್ನು ನಿಗದಿಪಡಿಸುತ್ತದೆ ಮತ್ತು ಅವನ್ನು ಪಾಲಿಸಲು ಮಾಡೆಲ್‌ಗಳಿಗೆ ತರಬೇತಿ ನೀಡುತ್ತದೆ. ಅಭಿವೃದ್ಧಿಪಡಿಸುವವರು ಆ ಮಿತಿಗಳೊಳಗೆ ಅನ್ವಯಗಳ ಕಾರ್ಯವನ್ನು ನಿರ್ದೇಶಿಸುತ್ತಾರೆ. ಬಳಕೆದಾರರು ಆ ನಿರ್ಬಂಧಗಳಿಗೆ ಒಳಪಟ್ಟು ಮಾಡೆಲ್‌ನ ಕೆಲಸವನ್ನು ನಿರ್ದೇಶಿಸುತ್ತಾರೆ. ನಮ್ಮ ಮಾಡೆಲ್‌ಗಳು ಜನರಿಗೆ ಜಗತ್ತನ್ನು ಅರ್ಥಮಾಡಿಕೊಳ್ಳಲು, ಸಾಧ್ಯತೆಗಳನ್ನು ಕಂಡುಕೊಳ್ಳಲು ಮತ್ತು ತಾವು ಆರಿಸಿಕೊಂಡ ಗುರಿಗಳನ್ನು ಸಾಧಿಸಲು ನೆರವಾಗುವ ಮೂಲಕ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಜೊತೆಗೆ, ಆ ನೆರವು ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನೂ ಗಂಭೀರವಾಗಿ ಪರಿಗಣಿಸಬೇಕು. ಮಾನವರ ಆಶಯಕ್ಕೆ ಬದ್ಧತೆ ಮತ್ತು ಉಳಿದ ನಾಲ್ಕು ಮೌಲ್ಯಗಳು ಸ್ಪೆಕ್‌ನ ರಚನೆಗೆ ಆಧಾರವಾಗಿವೆ. ಮಾಡೆಲ್‌ಗಳು ಎದುರಿಸುವ ಕೆಲವು ಪ್ರಮುಖ ಪರಸ್ಪರ ವಿರೋಧಿ ಅಗತ್ಯಗಳ ನಡುವೆ ಹೇಗೆ ಸಮತೋಲನ ಸಾಧಿಸಬೇಕೆಂಬುದಕ್ಕೂ ಅವು ಮಾರ್ಗದರ್ಶನ ನೀಡುತ್ತವೆ. ನಮ್ಮ ಮಾಡೆಲ್‌ಗಳು ಗೌರವಿಸಬೇಕಾದ ಮತ್ತು ಜನರು ಅನುಸರಿಸಲು ನೆರವಾಗಬೇಕಾದ ಎಲ್ಲ ಮಾನವ ಮೌಲ್ಯಗಳನ್ನೂ ಒಳಗೊಳ್ಳುವುದು ಇವುಗಳ ಉದ್ದೇಶವಲ್ಲ.

ಬದ್ಧತೆ ಎಂದರೆ ಸೂಚನೆಗಳನ್ನು ಅಕ್ಷರಶಃ ಪಾಲಿಸುವುದಕ್ಕಿಂತ ಮಿಗಿಲಾಗಿ, OpenAI, ಅಭಿವೃದ್ಧಿಪಡಿಸುವವರು ಮತ್ತು ಬಳಕೆದಾರರ ಉದ್ದೇಶಗಳು ಹಾಗೂ ಮೌಲ್ಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು. ಆ ತಿಳುವಳಿಕೆ ಅಪೂರ್ಣವಾಗಿದ್ದಾಗಲೂ ವಿವೇಕದಿಂದ ವರ್ತಿಸುವುದು. ಜನರ ನಂಬಿಕೆಗಳು ಮತ್ತು ಮೌಲ್ಯಗಳು ಬದಲಾಗಬಹುದು ಎಂಬುದನ್ನು ಗುರುತಿಸುವುದೂ ಇದರ ಭಾಗವಾಗಿದೆ. ಅವರಿಗೆ ತಿಳಿಯದಂತೆ ಅವರ ದಿಕ್ಕು ಬದಲಿಸದೆ ಅಥವಾ ಅವರ ಆಯ್ಕೆಗಳನ್ನು ಬದಿಗೊತ್ತದೆ, ಅವರು ಒಪ್ಪುವ ರೀತಿಯಲ್ಲಿ ಚಿಂತಿಸಲು ಮತ್ತು ಬೆಳೆಯಲು ನೆರವಾಗಬೇಕು. ಉದಾಹರಣೆಗೆ, ಉದ್ಯೋಗದ ಆಫರ್‌ಗಳನ್ನು ಹೋಲಿಸಲು ನೆರವಾಗುವಾಗ, ಮಾಡೆಲ್ ಅವರು ಹಿಂದೆ ತಿಳಿಸಿದ ಆದ್ಯತೆಗಳನ್ನು—ಉದಾಹರಣೆಗೆ, ನಿಗದಿತ ಕೆಲಸದ ಸಮಯ—ಬಳಸಿಕೊಳ್ಳಬಹುದು. ಹಾಗೆ ಮಾಡುವಾಗ ತನ್ನ ಊಹೆಗಳನ್ನು ಸ್ಪಷ್ಟವಾಗಿ ತಿಳಿಸಿ, ಅವನ್ನು ಸುಲಭವಾಗಿ ಸರಿಪಡಿಸಲು ಅವಕಾಶ ನೀಡಬೇಕು.

ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್‌ನಿಂದ ಇಡೀ ಮಾನವಕುಲಕ್ಕೆ ಪ್ರಯೋಜನವಾಗುವಂತೆ ಮಾಡುವುದು ನಮ್ಮ ಧ್ಯೇಯ. ಇದಕ್ಕಾಗಿ ವ್ಯಕ್ತಿಯ ತಕ್ಷಣದ ಉದ್ದೇಶಗಳಷ್ಟೇ ಅಲ್ಲದೆ, ಅವರ ದೀರ್ಘಕಾಲದ ಹಿತಾಸಕ್ತಿಗಳು ಮತ್ತು ಇತರರ ಮೇಲಿನ ಪರಿಣಾಮಗಳನ್ನೂ ಪರಿಗಣಿಸಬೇಕು. ಉಳಿದ ನಾಲ್ಕು ಮೌಲ್ಯಗಳು ಈ ಪರಿಗಣನೆಗಳನ್ನು ಸ್ಪಷ್ಟಪಡಿಸುತ್ತವೆ:

  • ಹಾನಿ ತಗ್ಗಿಸುವುದು ಎಂದರೆ ಕಟ್ಟುನಿಟ್ಟಿನ ಸುರಕ್ಷತಾ ಮಿತಿಗಳನ್ನು ಪಾಲಿಸುವುದು ಮತ್ತು ಮಾಡೆಲ್‌ನ ಕ್ರಮಗಳಿಂದ ಉಂಟಾಗಬಹುದೆಂದು ಊಹಿಸಬಹುದಾದ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳುವುದು.

  • ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಎಂದರೆ ಮಾಡೆಲ್‌ಗೆ ಏನು ತಿಳಿದಿದೆ, ಅದು ಏನು ಮಾಡುತ್ತದೆ ಮತ್ತು ಯಾವುದರ ಬಗ್ಗೆ ಅದಕ್ಕೆ ಖಚಿತತೆಯಿಲ್ಲ ಎಂಬುದನ್ನು ಸತ್ಯವಾಗಿ ಹೇಳುವುದು. ಇದರಿಂದ ಜನರು ಅದರ ರೀಜನಿಂಗ್ ಮತ್ತು ಕೆಲಸವನ್ನು ಅರ್ಥಮಾಡಿಕೊಂಡು ಮೌಲ್ಯಮಾಪನ ಮಾಡಬಹುದು.

  • ಮಾನವರ ಸ್ವನಿರ್ಧಾರ ಸಾಮರ್ಥ್ಯಕ್ಕೆ ನೆರವಾಗುವುದು ಎಂದರೆ ಜನರು ತಾವೇ ಅರ್ಥಮಾಡಿಕೊಂಡು, ಆಯ್ಕೆಮಾಡಿ, ಕಾರ್ಯಪ್ರವೃತ್ತರಾಗುವ ಸಾಮರ್ಥ್ಯವನ್ನು ಬಲಪಡಿಸುವುದು.

  • ಕಾಳಜಿ ಎಂದರೆ ಪರಿಣಾಮಕ್ಕೆ ಒಳಗಾಗುವವರ ಪರಿಸ್ಥಿತಿಗಳಿಗೆ ಗಮನ ನೀಡುವುದು, ಸಂಬಂಧಿತ ಸಾಮಾಜಿಕ ಮತ್ತು ವೃತ್ತಿಪರ ರೂಢಿಗಳನ್ನು ಪಾಲಿಸುವುದು ಹಾಗೂ ಜನರು ಅವಲಂಬಿಸಬಹುದಾದ ಕೆಲಸ ಮಾಡುವುದು.

ಸ್ಪೆಕ್ ಈ ಮೌಲ್ಯಗಳನ್ನು ಪ್ರಾಯೋಗಿಕ ಮಾರ್ಗದರ್ಶನವಾಗಿ ರೂಪಿಸುತ್ತದೆ. ಜನರನ್ನು ಮತ್ತು ಸಮಾಜವನ್ನು ರಕ್ಷಿಸಲು ಅಗತ್ಯವಿರುವಲ್ಲಿ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸುತ್ತದೆ. ಉಳಿದಂತೆ, ಬಹುಪಾಲು ಮಾರ್ಗದರ್ಶನವು ಬಳಕೆದಾರರು ಮತ್ತು ಅಭಿವೃದ್ಧಿಪಡಿಸುವವರು ಬದಲಿಸಬಹುದಾದ ಪೂರ್ವನಿಯೋಜಿತ ನಿಯಮಗಳ ರೂಪದಲ್ಲಿರುತ್ತದೆ.

ಈ ಮಾಡೆಲ್ ಸ್ಪೆಕ್ ಪರಿಷ್ಕರಣೆಯ ಜೊತೆಗೆ, ನಮ್ಮ ಮಾಡೆಲ್‌ಗಳು ಈ ಮೂಲ ಮೌಲ್ಯಗಳನ್ನು ಕಲಿಯಲು ಮತ್ತು ಸ್ಪೆಕ್‌ನ ನಿರ್ದಿಷ್ಟ ವರ್ತನಾ ತತ್ವಗಳನ್ನು ಉತ್ತಮವಾಗಿ ಅರ್ಥಮಾಡಿಕೊಂಡು ಪಾಲಿಸಲು ನೆರವಾಗುವ ಹೊಸ ತರಬೇತಿ ವಿಧಾನಗಳನ್ನೂ ಅನ್ವೇಷಿಸುತ್ತಿದ್ದೇವೆ. ಈ ತತ್ವಗಳು ಏಕೆ ಮುಖ್ಯ ಮತ್ತು ಹೊಸ ಸಂದರ್ಭಗಳಲ್ಲಿ ಅವನ್ನು ಹೇಗೆ ಅನ್ವಯಿಸಬೇಕು ಎಂಬ ತಿಳುವಳಿಕೆಯನ್ನು ಬೆಳೆಸುವುದು ಇದರ ಗುರಿ: ಸರಿಯಾದ ಕಾರಣಗಳಿಗಾಗಿ ಸರಿಯಾದ ಕೆಲಸಗಳನ್ನು ಮಾಡುವುದು. ಈ ತಿಳುವಳಿಕೆಯು ಮಹತ್ವದ ಪರಿಣಾಮ ಬೀರುವ ನಿರ್ಧಾರಗಳಲ್ಲಿ ವಿವೇಕಕ್ಕೂ, ದೈನಂದಿನ ನಿರ್ಧಾರಗಳಲ್ಲಿ ಕಾಳಜಿಗೂ ನೆರವಾಗಬೇಕೆಂದು ನಾವು ಬಯಸುತ್ತೇವೆ. ಇವು ಒಟ್ಟಾಗಿ ಜನರಿಗೆ ಮತ್ತು ಸಮಾಜಕ್ಕೆ ದೀರ್ಘಕಾಲ ಉಳಿಯುವ ಪ್ರಯೋಜನಗಳನ್ನು⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ನೀಡಬಲ್ಲವು. ಈ ತರಬೇತಿ ಕೆಲಸದ ಫಲಿತಾಂಶಗಳು ಮತ್ತು ಕಲಿತ ಪಾಠಗಳನ್ನು ಮುಂದಿನ ನವೀಕರಣಗಳಲ್ಲಿ ಹಂಚಿಕೊಳ್ಳುತ್ತೇವೆ.

ಹೊಸ ಮತ್ತು ತೆಗೆದುಹಾಕಲಾದ ವಿಭಾಗಗಳು

ಈ ಮರುಸಂಘಟನೆಯು ಹೆಚ್ಚುವರಿ ಮಾರ್ಗದರ್ಶನ ಅಗತ್ಯವಿರುವ ಅಂಶಗಳನ್ನು ಗುರುತಿಸಲು, ಅವುಗಳಿಗೆ ಹೊಸ ತತ್ವಗಳನ್ನು ರೂಪಿಸಲು ಮತ್ತು ಅಗತ್ಯಕ್ಕೆ ತಕ್ಕಂತೆ ಈಗಿರುವ ಮಾರ್ಗದರ್ಶನವನ್ನು ಪರಿಷ್ಕರಿಸಲು ಅಥವಾ ತೆಗೆದುಹಾಕಲು ನೆರವಾಯಿತು.

ಮಾನವರ ಆಶಯಕ್ಕೆ ಬದ್ಧತೆ ಕುರಿತ ಹೊಸ ವಿಭಾಗವು, ಜನರು ಯಾವುದಕ್ಕೆ ಮೌಲ್ಯ ನೀಡುತ್ತಾರೆ ಎಂಬುದೇ ಪ್ರಧಾನ ಎಂಬ ವಿಚಾರದಿಂದ ಆರಂಭವಾಗುತ್ತದೆ. ಸಾಮಾನ್ಯವಾಗಿ ಸೂಚನೆಗಳೇ ಆ ಮೌಲ್ಯಗಳ ಅತ್ಯಂತ ಸ್ಪಷ್ಟ ಮತ್ತು ಮುಖ್ಯ ಸಂಕೇತಗಳು. ಈ ವಿಧಾನವು ಹೊಂದಾಣಿಕೆಯನ್ನು ಸಹಾಯದ ಆಟಗಳ ಚೌಕಟ್ಟಿನಲ್ಲಿ ನೋಡುವ ಪರಿಕಲ್ಪನೆಯನ್ನು ಆಧರಿಸಿದೆ (ಆರಂಭಿಕ ಸಂಶೋಧನೆ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಮತ್ತು ನಂತರದ ಸಮಗ್ರ ಅವಲೋಕನ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ನೋಡಿ). ಈ ವಿಭಾಗವು ಪರಿಷ್ಕೃತ ಆದೇಶ ಶ್ರೇಣಿಯನ್ನು⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಒಳಗೊಂಡಿದೆ. ಯಾವ ಸೂಚನೆಗಳು ಅನ್ವಯಿಸುತ್ತವೆ ಮತ್ತು ಸಂಘರ್ಷಗಳನ್ನು ಹೇಗೆ ಬಗೆಹರಿಸಲಾಗುತ್ತದೆ ಎಂಬುದನ್ನು ಅದು ವಿವರಿಸುತ್ತದೆ. ಸಂದರ್ಭವನ್ನು ಎಚ್ಚರಿಕೆಯಿಂದ ಪರಿಗಣಿಸಿ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಎಂಬ ಹೊಸ ಉಪವಿಭಾಗವು, ಜನರ ಉದ್ದೇಶಗಳು ಮತ್ತು ಆದ್ಯತೆಗಳನ್ನು ಅರ್ಥಮಾಡಿಕೊಳ್ಳಲು ಮಾಡೆಲ್ ಸಂಭಾಷಣೆಗಳು, ನೆನಪುಗಳು ಮತ್ತು ಸಂದರ್ಭದ ಇತರ ಪುರಾವೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ವಿವರಿಸುತ್ತದೆ.

ನಾವು ಮಾನವರ ಸ್ವನಿರ್ಧಾರ ಸಾಮರ್ಥ್ಯಕ್ಕೆ ಬೆಂಬಲ ನೀಡುವ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಮತ್ತು ಸಂಬಂಧಿತ ಸಾಮಾಜಿಕ ರೂಢಿಗಳನ್ನು ಪಾಲಿಸುವ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಕುರಿತು ಪೂರ್ವನಿಯೋಜಿತ ನಿಯಮಗಳನ್ನೂ ಸೇರಿಸಿದ್ದೇವೆ. ಅಲ್ಲದೆ, ಅಡ್ಡಪರಿಣಾಮಗಳನ್ನು ನಿಯಂತ್ರಿಸುವ ಮತ್ತು ಅವುಗಳ ಬಗ್ಗೆ ತಿಳಿಸುವ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಕುರಿತ ಈಗಿರುವ ಮಾರ್ಗದರ್ಶನವನ್ನು ವಿಸ್ತರಿಸಿದ್ದೇವೆ. ಬಳಕೆದಾರರ ಗುರಿಗಳು ಮತ್ತು ಸೂಚನೆಗಳನ್ನು ಗೌರವಿಸುತ್ತಲೇ, ಕೆಲಸವು ಇತರರ ಮೇಲೆ ಬೀರುವ ಪರಿಣಾಮಗಳನ್ನು ಪರಿಗಣಿಸುವುದು, ಬಳಕೆದಾರರ ಸಾಮರ್ಥ್ಯಗಳನ್ನು ಬಲಪಡಿಸುವುದು ಮತ್ತು ಜನರು ಅವಲಂಬಿಸಬಹುದಾದ ಕೆಲಸ ಮಾಡುವುದು ಈ ತತ್ವಗಳಲ್ಲಿ ಸೇರಿವೆ. ಉಳಿದ ಮೌಲ್ಯಗಳು ಮಾಡೆಲ್‌ನ ವರ್ತನೆಯಲ್ಲಿ ಕಾಣಿಸಿಕೊಳ್ಳಬೇಕಾದ ಹೆಚ್ಚುವರಿ ವಿಧಾನಗಳನ್ನು ಇವು ಒಳಗೊಳ್ಳುತ್ತವೆ; ಇವು ಅನೇಕ ವೇಳೆ ಸೂಕ್ಷ್ಮವಾಗಿದ್ದರೂ ಮುಖ್ಯವಾಗಿವೆ.

ಅದೇ ಸಮಯದಲ್ಲಿ, ಸ್ಪೆಕ್‌ನ ಶೈಲಿಗೆ ಸಂಬಂಧಿಸಿದ ವಿವರವಾದ ಮಾರ್ಗದರ್ಶನದ ಬಹುಭಾಗವನ್ನು ತೆಗೆದುಹಾಕುತ್ತಿದ್ದೇವೆ. ಶೈಲಿಯು ಜನರ ಒಟ್ಟಾರೆ ಒಲವುಗಳಿಗೆ, ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳಿಗೆ ಹಾಗೂ ಪ್ರತಿಯೊಬ್ಬರ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಹೊಂದಿಕೊಳ್ಳಬೇಕು. ಬಳಕೆದಾರರ ಪ್ರತಿಕ್ರಿಯೆ ಮತ್ತು ಸಂದರ್ಭವು ಆ ಆದ್ಯತೆಗಳನ್ನು ತಿಳಿಯಲು ಆಧಾರವಾಗಬೇಕು. ಪ್ರಶ್ನೆಗಳನ್ನು ವಸ್ತುನಿಷ್ಠವಾಗಿ ಪರಿಗಣಿಸುವುದು⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಮುಂತಾದ ಹೆಚ್ಚು ದೃಢವಾದ ಪೂರ್ವನಿಯೋಜಿತ ನಿಯಮಗಳನ್ನು ಸ್ಪೆಕ್ ಉಳಿಸಿಕೊಂಡಿದೆ. ಬಳಕೆದಾರರು ಮತ್ತು ಅಭಿವೃದ್ಧಿಪಡಿಸುವವರು ನಿರ್ದಿಷ್ಟ ದೃಷ್ಟಿಕೋನವನ್ನು ಅನುಸರಿಸುವಂತೆ ಮಾಡೆಲ್‌ಗೆ ಸ್ಪಷ್ಟವಾಗಿ ಕೇಳಬಹುದು. ಆದರೆ ಅವರು ಏನು ಕೇಳಲು ಬಯಸುತ್ತಾರೆ ಎಂಬ ತನ್ನ ಊಹೆಯ ಆಧಾರದಲ್ಲೇ ಮಾಡೆಲ್ ಅಂತಹ ಆದ್ಯತೆ ಇದೆ ಎಂದು ತೀರ್ಮಾನಿಸಬಾರದು.

ಕೊನೆಯದಾಗಿ, ನಮ್ಮ ಮಾಡೆಲ್‌ಗಳ ಬಳಕೆಯ ಉದ್ದೇಶಗಳು ಮತ್ತು ಸಂದರ್ಭಗಳು ಹೆಚ್ಚು ವೈವಿಧ್ಯಮಯವಾಗುತ್ತಿರುವುದನ್ನು ಪ್ರತಿಬಿಂಬಿಸುವಂತೆ, ಸ್ಪೆಕ್‌ನಲ್ಲಿ ಮಾಡೆಲ್ ಅನ್ನು ಈಗ “ಅಸಿಸ್ಟೆಂಟ್” ಎನ್ನುವ ಬದಲು “GPT” ಎಂದು ಕರೆಯುತ್ತೇವೆ.

ಮುಂದಿನ ಹೆಜ್ಜೆಗಳು

ಮಾಡೆಲ್‌ಗಳು ಹೆಚ್ಚು ಸಮರ್ಥವಾಗುತ್ತಿರುವಂತೆ, ಸ್ಪೆಕ್‌ನ ಹಿಂದಿರುವ ಮೌಲ್ಯಗಳು ಮತ್ತು ರೀಸನಿಂಗ್ ಅನ್ನು ಇನ್ನಷ್ಟು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಈ ಪರಿಷ್ಕರಣೆ ಮೊದಲ ಹೆಜ್ಜೆಯಾಗಿದೆ. ನಾವು ಸಾಧಿಸಲು ಶ್ರಮಿಸುತ್ತಿರುವ ವರ್ತನೆಯನ್ನು ಮಾಡೆಲ್ ಸ್ಪೆಕ್ ವಿವರಿಸುತ್ತದೆ; ನಮ್ಮ ಮಾಡೆಲ್‌ಗಳು ಇನ್ನೂ ಅದನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಸಂಶೋಧನೆ, ನೈಜ ಬಳಕೆ ಮತ್ತು ಪ್ರತಿಕ್ರಿಯೆಗಳಿಂದ ಕಲಿಯುತ್ತಾ, ಸ್ಪೆಕ್ ಮತ್ತು ಮಾಡೆಲ್‌ಗಳೆರಡನ್ನೂ ಸುಧಾರಿಸುತ್ತಿರುತ್ತೇವೆ.

ಸ್ಪೆಕ್‌ನ ಯಾವ ಭಾಗಗಳು ನಿಮಗೆ ಮನವರಿಕೆಯಾಗುತ್ತವೆ, ಅದು ಸಾಧಿಸಿರುವ ಸಮತೋಲನವನ್ನು ನೀವು ಎಲ್ಲಿ ಒಪ್ಪುವುದಿಲ್ಲ ಮತ್ತು ಅದು ಯಾವ ಅಂಶಗಳನ್ನು ಕಡೆಗಣಿಸಿದೆ ಅಥವಾ ಅಸ್ಪಷ್ಟವಾಗಿ ಬಿಟ್ಟಿದೆ ಎಂಬುದನ್ನು ನಿಮ್ಮಿಂದ ಕೇಳಲು ಬಯಸುತ್ತೇವೆ. ಮೌಲ್ಯಗಳು, ಪರಸ್ಪರ ವಿರೋಧಿ ಅಗತ್ಯಗಳ ನಡುವಿನ ಸಮತೋಲನ ಮತ್ತು ನಿರ್ದಿಷ್ಟ ಪದಪ್ರಯೋಗದ ಕುರಿತ ಪ್ರತಿಕ್ರಿಯೆಗಳು ಅದನ್ನು ಸುಧಾರಿಸಲು ನಮಗೆ ನೆರವಾಗುತ್ತವೆ. ಪರಿಷ್ಕೃತ ಮಾಡೆಲ್ ಸ್ಪೆಕ್⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಓದಿ, ನಿಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ನಿಮ್ಮನ್ನು ಆಹ್ವಾನಿಸುತ್ತೇವೆ.

ಲೇಖಕರು

OpenAI