ಮುಖ್ಯ ವಿಷಯಕ್ಕೆ ನೇರವಾಗಿ ಹೋಗಿ
OpenAI

ಆಗಸ್ಟ್ 26, 2026

ಉತ್ಪನ್ನ

ಕಲಿಕೆ ಎಂದಿಗೂ ನಿಲ್ಲದು: AI ಯಿಂದ ನಿರಂತರ ಕಲಿಕೆ ಹೇಗೆ

ಲೋಡ್ ಆಗುತ್ತಿದೆ…

ವಿದ್ಯಾರ್ಥಿಗಳು ಶಾಲೆಗೆ ಮರಳುತ್ತಿರುವ ಈ ಸಂದರ್ಭದಲ್ಲಿ, ತರಗತಿಯಾಚೆಗೂ ಕಲಿಕೆಯನ್ನು ವಿಸ್ತರಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈಗಾಗಲೇ ChatGPT ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬ ಕುರಿತ ಹೊಸ ವರದಿಯನ್ನು OpenAI ಬಿಡುಗಡೆ ಮಾಡುತ್ತಿದೆ.

ಪ್ರಶ್ನೆ ಕೇಳಲು ಅಥವಾ ನೆರವು ಪಡೆಯಲು ವಿದ್ಯಾರ್ಥಿಗಳು ತರಗತಿಯವರೆಗೆ ಕಾಯಬೇಕಾದ ಪರಿಸ್ಥಿತಿ ಬಹಳ ಕಾಲದಿಂದ ಇತ್ತು. ಆಡಳಿತಾತ್ಮಕ ಕೆಲಸಗಳನ್ನೂ ನಿರ್ವಹಿಸುತ್ತಾ, ಶಿಕ್ಷಕರು ಹತ್ತಾರು ವಿದ್ಯಾರ್ಥಿಗಳ ನಡುವೆ ತಮ್ಮ ಗಮನವನ್ನು ಹಂಚಿಕೊಳ್ಳುತ್ತಾರೆ. ಪ್ರಶ್ನೆ ಉದ್ಭವಿಸಿದ ಕ್ಷಣದಲ್ಲೇ ಪೋಷಕರು ಮತ್ತು ಬೋಧಕರು ಯಾವಾಗಲೂ ಲಭ್ಯವಿರುವುದಿಲ್ಲ. ಈಗ AI ವಿದ್ಯಾರ್ಥಿಗಳಿಗೆ ಅಗತ್ಯವಿರುವಾಗಲೆಲ್ಲ ಮಾರ್ಗದರ್ಶನ, ಪ್ರತಿಕ್ರಿಯೆ ಮತ್ತು ಅಭ್ಯಾಸವನ್ನು ಲಭ್ಯವಾಗಿಸುವ ಮೂಲಕ ಈ ಪರಿಸ್ಥಿತಿಯನ್ನೇ ಬದಲಾಯಿಸುತ್ತಿದೆ.

ಗೌಪ್ಯತೆಯನ್ನು ಕಾಪಾಡುವ ವಿಶ್ಲೇಷಣೆಯ ಪ್ರಕಾರ, ಎಲ್ಲ ವಯೋಮಾನದ ಜನರು ತಮಗೆ ತಿಳಿದಿರುವುದನ್ನು ಪರೀಕ್ಷಿಸಲು ಪ್ರತಿ ವಾರ ChatGPT ಜೊತೆಗೆ 7 ಕೋಟಿಯಷ್ಟು ಸಂಭಾಷಣೆಗಳನ್ನು ನಡೆಸುತ್ತಾರೆ. ಇವುಗಳಲ್ಲಿ ತಪ್ಪು ಕಲ್ಪನೆಗಳ ಪರಿಶೀಲನೆ ಮತ್ತು ಹೆಚ್ಚಿನ ಅಭ್ಯಾಸಕ್ಕಾಗಿ ವಿನಂತಿಗಳೂ ಸೇರಿವೆ. ಯು.ಎಸ್.ನಲ್ಲಿ, ಶಾಲಾ ವರ್ಷದ ಅವಧಿಯಲ್ಲಿ ತರಗತಿ ಮತ್ತು ಮನೆಕೆಲಸಕ್ಕೆ ಸಂಬಂಧಿಸಿದ ಸಂದೇಶಗಳ ಸಂಖ್ಯೆ ವಾರಕ್ಕೆ 46 ಕೋಟಿಗೂ ಹೆಚ್ಚಾಗುತ್ತದೆ ಹಾಗೂ ಭಾನುವಾರ ಸಂಜೆ ಏರಿಕೆಯಾಗುತ್ತದೆ. ಬೇಸಿಗೆ ರಜೆಯಲ್ಲೂ ಅವುಗಳ ಸಂಖ್ಯೆ ವಾರಕ್ಕೆ 18 ಕೋಟಿಗಿಂತ ಹೆಚ್ಚಾಗಿಯೇ ಇರುತ್ತದೆ.

ವಿದ್ಯಾರ್ಥಿಗಳಿಗೆ, ಪಾಠ ಇನ್ನೂ ನೆನಪಿನಲ್ಲಿರುವಾಗಲೇ ತರಗತಿಯ ಹೊರಗೆ ಬೀಜಗಣಿತದ ನೆರವು ಪಡೆಯುವುದು ನಿರಂತರ ಕಲಿಕೆಯಾಗಬಹುದು. ಶಿಕ್ಷಕರಿಗೆ, ಮೊದಲ ಗಂಟೆ ಬಾರಿಸುವ ಮುನ್ನವೇ ವಿವಿಧ ಕೌಶಲ ಮಟ್ಟಗಳಿಗೆ ತಕ್ಕಂತೆ ಚಟುವಟಿಕೆಯನ್ನು ಹೊಂದಿಸುವುದು ಅಥವಾ ಪುನರಾವರ್ತಿತ ದಾಖಲೆ ಕೆಲಸಕ್ಕೆ ಕಡಿಮೆ ಸಮಯ ನೀಡಿ ಬೋಧನೆಗೆ ಹೆಚ್ಚು ಸಮಯ ಮೀಸಲಿಡುವುದು ಇದರ ಅರ್ಥವಾಗಬಹುದು. ಮನೆಯಲ್ಲಿ ಬೇರೆ ಭಾಷೆ ಮಾತನಾಡುವ ಕುಟುಂಬಗಳಿಗೆ, ತಮಗೆ ಅರ್ಥವಾಗುವ ಭಾಷೆಯಲ್ಲಿ ಶಾಲೆಯ ಮಾಹಿತಿಯನ್ನು ಪಡೆದು ಮಗುವಿನ ಪ್ರಗತಿಗೆ ಇನ್ನಷ್ಟು ಉತ್ತಮವಾಗಿ ಬೆಂಬಲ ನೀಡುವುದು ಇದರ ಅರ್ಥವಾಗಬಹುದು.

AI ಅನ್ನು ಫಲಪ್ರದವಾಗಿ, ಸೃಜನಾತ್ಮಕವಾಗಿ ಮತ್ತು ಅರ್ಥಪೂರ್ಣವಾಗಿ ಬಳಸುತ್ತಿರುವ ಅಮೆರಿಕದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವೈಯಕ್ತಿಕ ಉದಾಹರಣೆಗಳನ್ನೂ ವರದಿ ಎತ್ತಿ ತೋರಿಸುತ್ತದೆ.

AI ಶಿಕ್ಷಕರ ವಿವೇಚನೆ, ಪೋಷಕರ ಪ್ರೋತ್ಸಾಹ ಅಥವಾ ಕಲಿಯಲು ವಿದ್ಯಾರ್ಥಿಗಳು ಮಾಡಬೇಕಾದ ಪ್ರಯತ್ನಕ್ಕೆ ಪರ್ಯಾಯವಾಗಲಾರದು. ಆದರೆ ಸೂಕ್ತ ಮಾರ್ಗದರ್ಶನ ಮತ್ತು ಸುರಕ್ಷತಾ ಕ್ರಮಗಳಿದ್ದರೆ, ಶಿಕ್ಷಕರು ಬೋಧನೆಯತ್ತ ಗಮನ ಹರಿಸಲು ಇದು ಹೆಚ್ಚಿನ ಸಮಯ ಒದಗಿಸಬಹುದು ಮತ್ತು ಹೆಚ್ಚು ಜನರಿಗೆ ಹೆಚ್ಚು ಸಂದರ್ಭಗಳಲ್ಲಿ ವೈಯಕ್ತಿಕ ನೆರವು ದೊರೆಯುವಂತೆ ಮಾಡಬಹುದು.

AI ಯು ಕಲಿಕೆ ನಡೆಯುವ ಸಮಯ ಮತ್ತು ಸ್ಥಳವನ್ನು ಹೇಗೆ ಬದಲಾಯಿಸುತ್ತಿದೆ ಎಂಬ ಸಂಪೂರ್ಣ ವರದಿಯನ್ನು ಇಲ್ಲಿ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಓದಿ.