ಮುಖ್ಯ ವಿಷಯಕ್ಕೆ ನೇರವಾಗಿ ಹೋಗಿ
OpenAI

ಆಗಸ್ಟ್ 12, 2026

ಕಂಪನಿ

ನೆರವಿನಿಂದ ಕಾರ್ಯನಿರ್ವಹಣೆಯತ್ತ: ಉದ್ಯಮಗಳು AI ಅನ್ನು ಬಳಸುವ ಬಗೆ

ಸಂಸ್ಥೆಗಳು ಮತ್ತು ಉದ್ಯೋಗಿಗಳಾದ್ಯಂತ AI ಅಳವಡಿಕೆ ಹೇಗೆ ಹರಡುತ್ತಿದೆ ಹಾಗೂ ಅತ್ಯಾಧುನಿಕ ಸಂಸ್ಥೆಗಳು ವಿಭಿನ್ನವಾಗಿ ಏನು ಮಾಡುತ್ತಿವೆ ಎಂಬುದನ್ನು ಎರಡು ಹೊಸ ವರದಿಗಳು ತೋರಿಸುತ್ತವೆ.

ಲೋಡ್ ಆಗುತ್ತಿದೆ…

ಸಂಸ್ಥೆಗಳು AI ಅನ್ನು ಬಳಸುವ ಕ್ಷೇತ್ರಗಳನ್ನೂ, ಅದರಿಂದ ಮಾಡಿಸುವ ಕೆಲಸಗಳನ್ನೂ ವಿಸ್ತರಿಸುತ್ತಿವೆ. ಉದ್ಯಮ AI ನೆರವಿನಿಂದ ಕಾರ್ಯನಿರ್ವಹಣೆಯತ್ತ ಸಾಗುತ್ತಿದೆ. ಆದರೆ ಎಲ್ಲ ಸಂಸ್ಥೆಗಳೂ ಒಂದೇ ವೇಗದಲ್ಲಿ ಈ ಬದಲಾವಣೆ ಮಾಡುತ್ತಿಲ್ಲ. ಪ್ರತಿ ತಿಂಗಳ AI ಬಳಕೆಯಲ್ಲಿ ಅಗ್ರ 10%ನಲ್ಲಿರುವ ಅತ್ಯಾಧುನಿಕ ಸಂಸ್ಥೆಗಳು ಈಗ ಸಾಮಾನ್ಯ ಸಂಸ್ಥೆಗಳಿಗಿಂತ ಪ್ರತಿ ಸಕ್ರಿಯ ಬಳಕೆದಾರರಿಗೆ 8.3× ಹೆಚ್ಚು ಔಟ್‌ಪುಟ್ ಟೋಕನ್‌ಗಳನ್ನು ಸೃಷ್ಟಿಸುತ್ತವೆ. ಈ ಮಾಪನವು ಬಳಕೆಯ ಆಳದ ಸೂಚಕವಾಗಿದೆ. ಏಜೆಂಟ್‌ಗಳನ್ನು ಕಂಪನಿಯ ಸಂದರ್ಭ, ಪರಿಕರಗಳು ಮತ್ತು ಪುನರಾವರ್ತಿಸಬಹುದಾದ ಕಾರ್ಯಪ್ರವಾಹಗಳಿಗೆ ಜೋಡಿಸುವ ಸಾಮರ್ಥ್ಯಗಳ ಹೆಚ್ಚಿದ ಅಳವಡಿಕೆಯ ಜೊತೆಗೆ ಈ ಅಂತರವೂ ವಿಸ್ತರಿಸುತ್ತಿದೆ.

ಈ ಬದಲಾವಣೆಯನ್ನು ಪರಿಶೀಲಿಸುವ ಎರಡು ಪೂರಕ ಅಧ್ಯಯನಗಳನ್ನು ಇಂದು ಪ್ರಕಟಿಸುತ್ತಿದ್ದೇವೆ. ಉದ್ಯಮದ ಸಂಕೇತಗಳು OpenAI ಉದ್ಯಮ ಗ್ರಾಹಕರಲ್ಲಿ ಏಜೆಂಟಿಕ್ AI ಬಳಕೆಯ ಪ್ರಾಯೋಗಿಕ ಚಿತ್ರಣ ನೀಡುತ್ತದೆ. ಅತ್ಯಾಧುನಿಕ ಸಂಸ್ಥೆಗಳು ವಿಭಿನ್ನವಾಗಿ ಏನು ಮಾಡುತ್ತಿವೆ ಮತ್ತು ಏಜೆಂಟಿಕ್ ಕೆಲಸ ಎಲ್ಲಿ ವಿಸ್ತರಿಸುತ್ತಿದೆ ಎಂಬುದನ್ನೂ ಇದು ವಿವರಿಸುತ್ತದೆ. ಇದರ ಪೂರಕ ಕಾರ್ಯಪತ್ರವಾದ ಸಂಸ್ಥೆಗಳು AI ಅನ್ನು ಹೇಗೆ ಬಳಸುತ್ತವೆ: ChatGPTನಿಂದ ಪುರಾವೆ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ), ಕಂಪನಿಗಳು, ಹುದ್ದೆಗಳು ಮತ್ತು ಹಿರಿಯತೆಯ ಹಂತಗಳಲ್ಲಿ ಅಳವಡಿಕೆ ಹೇಗೆ ಬೆಳೆಯುತ್ತದೆ ಎಂಬುದನ್ನು ಪರಿಶೀಲಿಸುತ್ತದೆ.

ಈ ಅಧ್ಯಯನಗಳು ಒಟ್ಟಾಗಿ ಪ್ರಾಯೋಗಿಕ ಉದ್ಯಮ ಕಾರ್ಯಸೂಚಿಯನ್ನು ಸೂಚಿಸುತ್ತವೆ: ಮೌಲ್ಯಯುತ ಕೆಲಸ ಪೂರ್ಣಗೊಳಿಸಲು ಅಗತ್ಯವಾದ ಸಂದರ್ಭ ಮತ್ತು ಪರಿಕರಗಳಿಗೆ ಏಜೆಂಟ್‌ಗಳನ್ನು ಜೋಡಿಸುವುದು; ಸ್ಪಷ್ಟ ಅನುಮತಿಗಳು, ಪರಿಶೀಲನೆ ಮತ್ತು ಆಡಳಿತ ಸ್ಥಾಪಿಸುವುದು; ಪರಿಣಾಮಕಾರಿ ವೈಯಕ್ತಿಕ ಕಾರ್ಯಪ್ರವಾಹಗಳನ್ನು ಹಂಚಿಕೊಂಡ ಕಾರ್ಯವಿಧಾನಗಳಾಗಿ ಪರಿವರ್ತಿಸಲು ಉದ್ಯೋಗಿಗಳಿಗೆ ನೆರವಾಗುವುದು.

ಸಂಸ್ಥೆಗಳು AI ಅನ್ನು ಕೆಲಸಕ್ಕೆ ಬಳಸುತ್ತಿರುವ ಬಗೆಯ ಕುರಿತು ಈ ವರದಿಗಳು ಐದು ಪ್ರಮುಖ ಒಳನೋಟಗಳನ್ನು ನೀಡುತ್ತವೆ:

  • ಉದ್ಯಮದ ಬಳಕೆ ಹೆಚ್ಚು ಏಜೆಂಟಿಕ್ ಆಗುತ್ತಿದೆ. ಜೂನ್ ವೇಳೆಗೆ, ಉದ್ಯಮ ಗ್ರಾಹರ ಸಂಯೋಜಿತ Codex ಮತ್ತು ChatGPT ಔಟ್‌ಪುಟ್ ಟೋಕನ್‌ಗಳಲ್ಲಿ 64% ಅನ್ನು Codex ಸೃಷ್ಟಿಸಿದೆ. ಏಜೆಂಟ್‌ಗಳು ಹೆಚ್ಚು ಮಹತ್ವದ, ನಿಯೋಜಿತ ಕೆಲಸದತ್ತ ಬದಲಾವಣೆಗೆ ನೆರವಾಗುತ್ತಿರುವುದನ್ನು ಇದು ಸೂಚಿಸುತ್ತದೆ.
  • ಅತ್ಯಾಧುನಿಕ ಸಂಸ್ಥೆಗಳ ಅಂತರ ವಿಸ್ತರಿಸುತ್ತಿದೆ. ಪ್ರತಿ ತಿಂಗಳ AI ಬಳಕೆಯಲ್ಲಿ ಅಗ್ರ 10%ನಲ್ಲಿರುವ ಅತ್ಯಾಧುನಿಕ ಸಂಸ್ಥೆಗಳು ಈಗ ಸಾಮಾನ್ಯ ಸಂಸ್ಥೆಗಳಿಗಿಂತ ಪ್ರತಿ ಸಕ್ರಿಯ ಬಳಕೆದಾರರಿಗೆ 8.3× ಹೆಚ್ಚು ಔಟ್‌ಪುಟ್ ಟೋಕನ್‌ಗಳನ್ನು ಸೃಷ್ಟಿಸುತ್ತವೆ. ಜನವರಿಯಲ್ಲಿ ಈ ಪ್ರಮಾಣ 2.6× ಆಗಿತ್ತು.
  • ಅತ್ಯಾಧುನಿಕ ಸಂಸ್ಥೆಗಳು ಸುಧಾರಿತ ಸಾಮರ್ಥ್ಯಗಳನ್ನು ಹೆಚ್ಚು ಬಳಸುತ್ತವೆ. ಅತ್ಯಾಧುನಿಕ ಸಂಸ್ಥೆಗಳ ಸಕ್ರಿಯ ಬಳಕೆದಾರರಲ್ಲಿ 21% ಮಂದಿ ಪ್ರತಿ ವಾರ ಪ್ಲಗಿನ್‌ಗಳನ್ನು ಬಳಸುತ್ತಾರೆ; ಸಾಮಾನ್ಯ ಸಂಸ್ಥೆಗಳಲ್ಲಿ ಇದು 9%. OpenAIನಲ್ಲಿ 95% ಉದ್ಯೋಗಿಗಳು ವಾರಕ್ಕೊಮ್ಮೆ ಪ್ಲಗಿನ್‌ಗಳನ್ನು ಬಳಸುತ್ತಾರೆ. ಇದು ಇನ್ನಷ್ಟು ಆಳವಾದ ಅಳವಡಿಕೆಯ ಸಾಧ್ಯತೆಯನ್ನು ತೋರಿಸುತ್ತದೆ.
  • ಜ್ಞಾನಾಧಾರಿತ ಕೆಲಸದಾದ್ಯಂತ ಏಜೆಂಟ್‌ಗಳು ವ್ಯಾಪಿಸುತ್ತಿವೆ. ಫೆಬ್ರವರಿಯಿಂದ ಸಾಪ್ತಾಹಿಕ ಸಕ್ರಿಯ ಉದ್ಯಮ Codex ಬಳಕೆದಾರರ ಸಂಖ್ಯೆ ಕಾನೂನು ಕ್ಷೇತ್ರದಲ್ಲಿ 108×, ಮಾರಾಟದಲ್ಲಿ 41×, ನೇಮಕಾತಿಯಲ್ಲಿ 41× ಮತ್ತು ಮಾರುಕಟ್ಟೆಯಲ್ಲಿ 26× ಬೆಳೆದಿದೆ. ಎಂಜಿನಿಯರಿಂಗ್‌ನಲ್ಲಿ ಇದು 5× ಆಗಿದೆ.
  • ವೃತ್ತಿಜೀವನದ ಆರಂಭದಲ್ಲಿರುವ ಉದ್ಯೋಗಿಗಳು AI ಅನ್ನು ಹೆಚ್ಚು ಬಳಸುತ್ತಾರೆ. ಆರಂಭಿಕ ಹಂತದ ಉದ್ಯೋಗಿಗಳಲ್ಲಿ ಬಳಕೆ ಅತ್ಯಧಿಕವಾಗಿದ್ದು, ಹಿರಿಯ ಉದ್ಯೋಗಿಗಳಲ್ಲಿ ಕಡಿಮೆಯಾಗುತ್ತದೆ. AI ಬಳಕೆಯಲ್ಲಿ ಅವರಿಗೆ ತುಲನಾತ್ಮಕ ಪ್ರಯೋಜನವಿರಬಹುದು ಎಂಬುದನ್ನು ಇದು ಸೂಚಿಸುತ್ತದೆ.

ಉದ್ಯಮಗಳು ಕೇಳುವುದರಿಂದ ಮಾಡುವುದರತ್ತ ಸಾಗುತ್ತಿವೆ

ಉದ್ಯಮ AI ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಕೆಲಸವನ್ನು ನಿರ್ವಹಿಸುವುದರತ್ತ ಸಾಗುತ್ತಿದೆ. ಸಹಾಯಕಗಳು ಕೆಲಸದ ಕುರಿತು ಯೋಚಿಸಲು ನೆರವಾಗುತ್ತವೆ; ಏಜೆಂಟ್‌ಗಳು ಅದನ್ನು ಪೂರ್ಣಗೊಳಿಸಲು ನೆರವಾಗುತ್ತವೆ. ChatGPT Work ಮತ್ತು Codexನಂತಹ ಉತ್ಪನ್ನಗಳು ಪರಿಕರಗಳನ್ನು ಬಳಸಿ, ಫೈಲ್‌ಗಳನ್ನು ರಚಿಸಿ, ಪರಿಶೀಲನೆಗಾಗಿ ಕೆಲಸದ ಫಲಿತಾಂಶವನ್ನು ಸಿದ್ಧಪಡಿಸಬಲ್ಲವು. ಉದಾಹರಣೆಗೆ, ಪ್ರಸ್ತುತಿಯನ್ನು ಹೇಗೆ ಸಿದ್ಧಪಡಿಸಬೇಕೆಂದು AIಗೆ ಕೇಳುವ ಬದಲು, ವಿವಿಧ ಮೂಲಗಳಿಂದ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಿ ಪ್ರಸ್ತುತಿಯ ಕರಡು ಸಿದ್ಧಪಡಿಸುವಂತೆ ಉದ್ಯೋಗಿಯೊಬ್ಬರು ಏಜೆಂಟ್‌ಗೆ ಕೇಳಬಹುದು.

ಈ ಬದಲಾವಣೆ ಉದ್ಯಮದ ಬಳಕೆಯಲ್ಲಿ ಗೋಚರಿಸುತ್ತದೆ. ಜೂನ್ ವೇಳೆಗೆ, ಉದ್ಯಮ ಗ್ರಾಹಕರ ಸಂಯೋಜಿತ Codex ಮತ್ತು ChatGPT ಔಟ್‌ಪುಟ್ ಟೋಕನ್‌ಗಳಲ್ಲಿ 64% ಅನ್ನು Codex ಸೃಷ್ಟಿಸಿದೆ. ಏಜೆಂಟಿಕ್ ಕಾರ್ಯಪ್ರವಾಹಗಳು ಸಾಮಾನ್ಯವಾಗಿ ದೀರ್ಘವಾದ, ಬಹುಹಂತದ ಕಾರ್ಯಗಳನ್ನು ನಿರ್ವಹಿಸುವುದರಿಂದ ಹೆಚ್ಚು ಔಟ್‌ಪುಟ್ ಸೃಷ್ಟಿಸುತ್ತವೆ. ಆದ್ದರಿಂದ ಈ ಅಂಕಿ Codex ಬಳಕೆಯ ಆವರ್ತನೆ ಮತ್ತು ಆ ಕಾರ್ಯಗಳು ಸೃಷ್ಟಿಸುವ ಔಟ್‌ಪುಟ್ ಪ್ರಮಾಣ ಎರಡನ್ನೂ ಪ್ರತಿಬಿಂಬಿಸುತ್ತದೆ.

ಸಂಸ್ಥೆಗಳು ಏಜೆಂಟಿಕ್ AI ಅಳವಡಿಸಿಕೊಂಡಂತೆ ಅತ್ಯಾಧುನಿಕ ಸಂಸ್ಥೆಗಳ ಅಂತರ ವಿಸ್ತರಿಸುತ್ತದೆ

ಪ್ರತಿ ತಿಂಗಳು, ಪ್ರತಿ ಸಕ್ರಿಯ ಬಳಕೆದಾರರ ಔಟ್‌ಪುಟ್ ಟೋಕನ್‌ಗಳ ಆಧಾರದಲ್ಲಿ ಉದ್ಯಮ ಗ್ರಾಹಕರಿಗೆ ಶ್ರೇಣಿ ನೀಡುತ್ತೇವೆ. ಆ ತಿಂಗಳ ಅಗ್ರ 10%ನಲ್ಲಿರುವವು ಅತ್ಯಾಧುನಿಕ ಸಂಸ್ಥೆಗಳು; ಸಾಮಾನ್ಯ ಸಂಸ್ಥೆಗಳು 45ನೇ ಮತ್ತು 55ನೇ ಶತಕಗಳ ನಡುವೆ ಇರುತ್ತವೆ. ಜೂನ್ ವೇಳೆಗೆ ಅತ್ಯಾಧುನಿಕ ಸಂಸ್ಥೆಗಳು ಸಾಮಾನ್ಯ ಸಂಸ್ಥೆಗಳಿಗಿಂತ ಪ್ರತಿ ಸಕ್ರಿಯ ಬಳಕೆದಾರರಿಗೆ 8.3× ಹೆಚ್ಚು ಔಟ್‌ಪುಟ್ ಟೋಕನ್‌ಗಳನ್ನು ಸೃಷ್ಟಿಸಿದವು. ಇದು ಜನವರಿಯ 2.6× ಅಂತರಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳ. ಅತ್ಯಾಧುನಿಕ ಸಂಸ್ಥೆಗಳ ಅಂತರವು ವಿವಿಧ ಉದ್ಯಮಗಳು ಮತ್ತು ಕಂಪನಿಯ ಗಾತ್ರಗಳಲ್ಲೂ ಕಾಣಿಸುತ್ತದೆ. ತೀವ್ರ AI ಬಳಕೆ ತಂತ್ರಜ್ಞಾನ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಉದ್ಯಮದ ಸಂಕೇತಗಳು ಉದ್ಯಮಗಳು ಮತ್ತು ಕಾರ್ಯಗಳ ನಡುವೆ ಈ ಅಂತರ ಹೇಗೆ ಬದಲಾಗುತ್ತದೆ ಎಂಬುದನ್ನು ಪರಿಶೀಲಿಸುತ್ತದೆ.

ಸಂಸ್ಥೆಗಳು AI ಅನ್ನು ಹೇಗೆ ಬಳಸುತ್ತವೆ: ChatGPTನಿಂದ ಪುರಾವೆ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಅಧ್ಯಯನಕ್ಕೆ ಒಳಪಟ್ಟ ಅಮೆರಿಕದ ಸಾರ್ವಜನಿಕ ಕಂಪನಿಗಳಲ್ಲಿ, AI ಅಳವಡಿಸಿಕೊಂಡ ಉದ್ಯಮಗಳು ಅಳವಡಿಸಿಕೊಳ್ಳದವುಗಳಿಗಿಂತ ಬಲವಾದ ಹಣಕಾಸು ಸೂಚಕಗಳನ್ನು ಹೊಂದಿದ್ದವು. ಅವು ಹೆಚ್ಚು ಆಸ್ತಿಗಳನ್ನು ಹೊಂದಿದ್ದವು, ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದ್ದವು ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ ಮಾಡಿದ್ದವು. ವರದಿಗಳನ್ನು ಒಟ್ಟಾಗಿ ಓದಿದಾಗ, AI ಅನ್ನು ವ್ಯಾಪಕಗೊಳಿಸಲು ಕೇವಲ ಪ್ರವೇಶ ಸಾಕಾಗದಿರಬಹುದು ಎಂದು ತಿಳಿಯುತ್ತದೆ. ಉದ್ಯೋಗಿಗಳ ನಿರಂತರ ಕಲಿಕೆ, ಹಂಚಿಕೊಂಡ ಕಾರ್ಯಪ್ರವಾಹಗಳು, ದತ್ತಾಂಶ ಮೂಲಸೌಕರ್ಯ ಮತ್ತು ಆಡಳಿತದಲ್ಲಿ ಪೂರಕ ಹೂಡಿಕೆಗಳು ವಿಶಾಲವೂ ಆಳವೂ ಆದ ಅಳವಡಿಕೆಗೆ ಬೆಂಬಲ ನೀಡಬಹುದು.

ಪ್ಲಗಿನ್‌ಗಳು ಮತ್ತು ಕೌಶಲ್ಯಗಳಂತಹ ಸುಧಾರಿತ ಸಾಮರ್ಥ್ಯಗಳು ಅತ್ಯಾಧುನಿಕ ಸಂಸ್ಥೆಗಳಲ್ಲಿ ಹೆಚ್ಚು ಸಾಮಾನ್ಯವಾಗಿವೆ

ಪರಿಣಾಮಕಾರಿಯಾಗಲು AI ಏಜೆಂಟ್‌ಗಳಿಗೆ ಸರಿಯಾದ ಸಂದರ್ಭ ಮತ್ತು ಪರಿಕರಗಳಿಗೆ ಪ್ರವೇಶ ಬೇಕು. ಪ್ಲಗಿನ್‌ಗಳು(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ನಿರ್ದಿಷ್ಟ ಕಾರ್ಯಪ್ರವಾಹಗಳನ್ನು ಪೂರ್ಣಗೊಳಿಸಲು ಏಜೆಂಟ್‌ಗಳಿಗೆ ನೆರವಾಗುವ ಸಾಮರ್ಥ್ಯಗಳನ್ನು ಒಟ್ಟುಗೂಡಿಸುತ್ತವೆ. ಅವು ಪುನರ್ಬಳಕೆಯ ಸೂಚನೆಗಳನ್ನು ನೀಡುವ ಕೌಶಲ್ಯಗಳನ್ನು, ಕಂಪನಿಯ ದತ್ತಾಂಶ, ಪರಿಕರಗಳು ಮತ್ತು ಕ್ರಿಯೆಗಳಿಗೆ ಸಂಪರ್ಕಿಸುವ ಆ್ಯಪ್‌ಗಳೊಂದಿಗೆ ಸಂಯೋಜಿಸಬಲ್ಲವು. ಉದಾಹರಣೆಗೆ, ಮಾರಾಟದ ಪ್ಲಗಿನ್ ತಂಡದ ಮಾರ್ಗಸೂಚಿಯನ್ನು ಅದರ ಗ್ರಾಹಕ ಸಂಬಂಧ ನಿರ್ವಹಣಾ ವ್ಯವಸ್ಥೆಯ ಪ್ರವೇಶದೊಂದಿಗೆ ಸಂಯೋಜಿಸಬಹುದು. ಇದರಿಂದ ಏಜೆಂಟ್ ಪ್ರಸ್ತುತ ಗ್ರಾಹಕರ ಮಾಹಿತಿ ಮತ್ತು ಹಿಂದಿನ ಪ್ರಸ್ತಾವನೆಗಳನ್ನು ಬಳಸಿ ಪರಿಶೀಲನೆಗಾಗಿ ಸೂಕ್ತ ಪ್ರತಿಕ್ರಿಯೆ ಸಿದ್ಧಪಡಿಸಬಹುದು.

ಸುಧಾರಿತ ಸಾಮರ್ಥ್ಯಗಳಲ್ಲಿ ಅತ್ಯಾಧುನಿಕ ಸಂಸ್ಥೆಗಳು ಸ್ಪಷ್ಟ ಮುನ್ನಡೆ ಹೊಂದಿವೆ. ಸಾಪ್ತಾಹಿಕ ಸಕ್ರಿಯ ಬಳಕೆದಾರರಲ್ಲಿ, ಅತ್ಯಾಧುನಿಕ ಸಂಸ್ಥೆಗಳಲ್ಲಿ 21% ಮಂದಿ ಪ್ಲಗಿನ್‌ಗಳನ್ನು ಮತ್ತು 19% ಮಂದಿ ಕೌಶಲ್ಯಗಳನ್ನು ಬಳಸುತ್ತಾರೆ. ಸಾಮಾನ್ಯ ಸಂಸ್ಥೆಗಳಲ್ಲಿ ಇದು ಕ್ರಮವಾಗಿ ಕೇವಲ 9% ಮತ್ತು 3%. ಆದರೆ ಅತ್ಯಾಧುನಿಕ ಸಂಸ್ಥೆಗಳ ಅಳವಡಿಕೆ ಸಾಧ್ಯವಿರುವ ಪ್ರಮಾಣದ ಒಂದು ಸಣ್ಣ ಭಾಗವಷ್ಟೇ. OpenAIಯ ಆಂತರಿಕ ಬಳಕೆ ಈ ಸಾಮರ್ಥ್ಯಗಳ ಇನ್ನಷ್ಟು ಆಳವಾದ ಬಳಕೆಯ ಸಾಧ್ಯತೆಯನ್ನು ತೋರಿಸುತ್ತದೆ. ಸಕ್ರಿಯ ಬಳಕೆದಾರರಲ್ಲಿ ಸಾಪ್ತಾಹಿಕ ಪ್ಲಗಿನ್ ಬಳಕೆ 95% ಇದೆ. ಏಜೆಂಟ್‌ಗಳು ಕೆಲಸವನ್ನು ಹೇಗೆ ಪರಿವರ್ತಿಸುತ್ತಿವೆ ಎಂಬ ನಮ್ಮ ಸಂಶೋಧನೆಯು OpenAI ಉದ್ಯೋಗಿಗಳು ಸುಧಾರಿತ ಸಾಮರ್ಥ್ಯಗಳನ್ನು ಬಳಸುವ ಬಗೆಯನ್ನು ವಿವರವಾಗಿ ತೋರಿಸುತ್ತದೆ.

ಜ್ಞಾನಾಧಾರಿತ ಕೆಲಸದಾದ್ಯಂತ ಏಜೆಂಟ್‌ಗಳು ವ್ಯಾಪಿಸುತ್ತಿವೆ

ತಂತ್ರಾಂಶ ಎಂಜಿನಿಯರಿಂಗ್ ಏಜೆಂಟಿಕ್ ಅಳವಡಿಕೆಯ ಆರಂಭಿಕ ಕೇಂದ್ರವಾಗಿತ್ತು. ಆದರೆ ಈಗ ಜ್ಞಾನಾಧಾರಿತ ಕಾರ್ಯಗಳಾದ್ಯಂತ Codex ಬಳಕೆ ವೇಗವಾಗಿ ಬೆಳೆಯುತ್ತಿದೆ. ಫೆಬ್ರವರಿಯಿಂದ ಸಾಪ್ತಾಹಿಕ ಸಕ್ರಿಯ ಉದ್ಯಮ Codex ಬಳಕೆದಾರರ ಸಂಖ್ಯೆ ಕಾನೂನು ಕ್ಷೇತ್ರದಲ್ಲಿ 108×, ಮಾರಾಟದಲ್ಲಿ 41×, ನೇಮಕಾತಿಯಲ್ಲಿ 41× ಮತ್ತು ಮಾರುಕಟ್ಟೆಯಲ್ಲಿ 26× ಬೆಳೆದಿದೆ. ಎಂಜಿನಿಯರಿಂಗ್‌ನಲ್ಲಿ ಇದು 5× ಆಗಿದೆ. 

ವರ್ಜಿನ್ ಅಟ್ಲಾಂಟಿಕ್ನಲ್ಲಿ ಈ ಬದಲಾವಣೆ ವ್ಯವಹಾರದಾದ್ಯಂತ ಗೋಚರಿಸುತ್ತದೆ. ಎಂಜಿನಿಯರಿಂಗ್ ತಂಡಗಳು ಹಳೆಯ ಕೋಡ್ ಅನ್ನು ಎರಡು ವಾರಗಳ ಬದಲು 30 ನಿಮಿಷಗಳಲ್ಲಿ ಮರುರಚಿಸಲು Codex ಬಳಸುತ್ತವೆ. ಅವರ ಉತ್ಪನ್ನ ತಂಡಗಳು ವಾರಗಳ ಸ್ಪರ್ಧಾತ್ಮಕ ಸಂಶೋಧನೆಯನ್ನು ಕೆಲವೇ ಗಂಟೆಗಳಲ್ಲಿ ಪೂರ್ಣಗೊಳಿಸಲು ChatGPT Work ಬಳಸುತ್ತವೆ. ಇದು ವಿಮಾನಯಾನ ಸಂಸ್ಥೆಯ ಐದು ವರ್ಷದ ಡಿಜಿಟಲ್ ಕಾರ್ಯತಂತ್ರವನ್ನು ರೂಪಿಸುತ್ತಿದೆ.

ಒಂದು ಕೋಟಿಗೂ ಹೆಚ್ಚು ಸಂದೇಶಗಳ ಮಾದರಿಯನ್ನು ಆಧರಿಸಿ, ಉದ್ಯಮದ ಸಂಕೇತಗಳು ಈ ಸಾಮರ್ಥ್ಯಗಳು ಉದ್ಯಮಗಳು ಮತ್ತು ಕಾರ್ಯಗಳಾದ್ಯಂತ ಹೇಗೆ ಹರಡುತ್ತಿವೆ ಎಂಬುದನ್ನು ಅನ್ವೇಷಿಸುತ್ತದೆ.

ವೃತ್ತಿಜೀವನದ ಆರಂಭದಲ್ಲಿರುವ ಉದ್ಯೋಗಿಗಳು AI ಅನ್ನು ಹೆಚ್ಚು ಬಳಸುತ್ತಾರೆ

ನಾಯಕರು ಮತ್ತು ಕಾರ್ಯನಿರ್ವಾಹಕರಲ್ಲಿ AI ಬಳಕೆ ಹೆಚ್ಚಿದೆ ಎಂದು ಅನೇಕ ಸಮೀಕ್ಷೆಗಳು ವರದಿ ಮಾಡಿವೆ. ಆದರೆ ಲಕ್ಷಾಂತರ ಸಂಭಾಷಣೆಗಳ ಆಡಳಿತಾತ್ಮಕ ದತ್ತಾಂಶವು ಇದಕ್ಕೆ ವಿರುದ್ಧವಾದ ಚಿತ್ರಣ ನೀಡುತ್ತದೆ. ಅಳವಡಿಕೆಯ ಆರು ತಿಂಗಳ ಬಳಿಕ, ವೃತ್ತಿಜೀವನದ ಆರಂಭದಲ್ಲಿರುವ ಉದ್ಯೋಗಿಗಳು ಕಾರ್ಯನಿರ್ವಾಹಕರಿಗಿಂತ ವಾರಕ್ಕೆ 13 ಹೆಚ್ಚು ಸಂದೇಶಗಳನ್ನು ಕಳುಹಿಸಿದರು.

ಬಲವಾದ AI ಬಳಕೆಯ ಅಭ್ಯಾಸವಿರುವ ಉದ್ಯೋಗಿಗಳನ್ನು ಗುರುತಿಸಿ, ಅವರ ಕಾರ್ಯಪ್ರವಾಹಗಳನ್ನು ಎಲ್ಲರಿಗೂ ಗೋಚರಿಸುವಂತೆ ಮಾಡುವ ಪ್ರಾಯೋಗಿಕ ಅವಕಾಶವನ್ನು ಈ ಫಲಿತಾಂಶ ನಾಯಕರಿಗೆ ತೋರಿಸುತ್ತದೆ. ಇದರಿಂದ ಪರಿಣಾಮಕಾರಿ ಪದ್ಧತಿಗಳು ಎಲ್ಲ ಹಂತಗಳಿಗೂ ಹರಡಬಹುದು.

ಅತ್ಯಾಧುನಿಕ ಸಂಸ್ಥೆಗಳ ಅಂತರ ತಗ್ಗಿಸಲು ನಾಯಕರು ಏನು ಮಾಡಬಹುದು

ಕಂಪನಿಗಳು ಒಂದೇ ಮಾದರಿಗಳಿಗೆ ಪ್ರವೇಶ ಹೊಂದಿರಬಹುದು. ಆದರೆ ಅತ್ಯಾಧುನಿಕ ಸಂಸ್ಥೆಗಳು ಅವುಗಳನ್ನು ತಮ್ಮ ಸಂಸ್ಥೆಗಳಾದ್ಯಂತ ಹೆಚ್ಚು ವೇಗವಾಗಿ ಮತ್ತು ಆಳವಾಗಿ ಕೆಲಸಕ್ಕೆ ಬಳಸುತ್ತಿವೆ. 

ಏಜೆಂಟಿಕ್ ಕಾರ್ಯಪ್ರವಾಹಗಳನ್ನು ಎಂಜಿನಿಯರಿಂಗ್‌ನ ಆಚೆಗೂ ವಿಸ್ತರಿಸಿ, ಯಶಸ್ವಿ ವೈಯಕ್ತಿಕ ಬಳಕೆಯ ಸಂದರ್ಭಗಳನ್ನು ಸಂಸ್ಥೆಯಾದ್ಯಂತ ಪುನರಾವರ್ತಿಸಬಹುದಾದ ಪದ್ಧತಿಗಳಾಗಿ ಪರಿವರ್ತಿಸುವ ಮೂಲಕ ಈ ಅಂತರವನ್ನು ತಗ್ಗಿಸುವ ಅವಕಾಶ ನಾಯಕರಿಗಿದೆ. ಸ್ಪಷ್ಟ ಅನುಮತಿಗಳು, ಆಡಳಿತ ಮತ್ತು ಮಾನವ ಪರಿಶೀಲನೆಯೊಂದಿಗೆ ಏಜೆಂಟ್‌ಗಳನ್ನು ಕಂಪನಿಯ ಸಂದರ್ಭ ಮತ್ತು ಪರಿಕರಗಳಿಗೆ ಜೋಡಿಸುವ ಮೂಲಕ ಸಂಸ್ಥೆಗಳು ನೆರವಿನಿಂದ ಕಾರ್ಯನಿರ್ವಹಣೆಯತ್ತ ಸಾಗಬಹುದು.

ಅತ್ಯಾಧುನಿಕ ಸಂಸ್ಥೆಗಳು ಉದ್ಯಮಗಳು ಮತ್ತು ಕಾರ್ಯಗಳಾದ್ಯಂತ AI ಅನ್ನು ಹೇಗೆ ಕೆಲಸಕ್ಕೆ ಬಳಸುತ್ತಿವೆ ಎಂಬ ಆಳವಾದ ಒಳನೋಟಗಳಿಗಾಗಿ ಉದ್ಯಮದ ಸಂಕೇತಗಳು ಓದಿ. ತಮ್ಮ ಸಂಸ್ಥೆಯು ಅತ್ಯಾಧುನಿಕ ಸಂಸ್ಥೆಗಳಿಗೆ ಹೋಲಿಸಿದರೆ ಹೇಗಿದೆ ಎಂಬುದನ್ನು ತಿಳಿಯಲು OpenAI ಉದ್ಯಮ ಗ್ರಾಹಕರು ಕಸ್ಟಮೈಸ್ ಮಾಡಿದ ಮಾನದಂಡವನ್ನು ವಿನಂತಿಸಬಹುದು.

ಸಂಸ್ಥೆಗಳು ಮತ್ತು ಉದ್ಯೋಗಿಗಳಾದ್ಯಂತ ಅಳವಡಿಕೆ ಹೇಗೆ ಹರಡುತ್ತದೆ ಎಂಬುದನ್ನು ತಿಳಿಯಲು ಸಂಸ್ಥೆಗಳು AI ಅನ್ನು ಹೇಗೆ ಬಳಸುತ್ತವೆ: ChatGPTನಿಂದ ಪುರಾವೆ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಓದಿ.