“ಸುಳ್ಳು ಸಾಕ್ಷಿ” ಕಾರ್ಯಾಚರಣೆ: ಅಧಿಕಾರಿಗಳ ಸೋಗಿನಲ್ಲಿ ಹಣ ಮರುಪಡೆಯುವ ನಕಲಿ ಸೇವೆ
ಬಹುಶಃ ಕಾಂಬೋಡಿಯಾದಿಂದ ಬಂದ ಖಾತೆಗಳನ್ನು OpenAI ನಿಷೇಧಿಸಿದೆ. ಇವು ವಂಚನೆಗೆ ಒಳಗಾದವರನ್ನು ಗುರಿಯಾಗಿಸಿ, ಕೃತಕ ಬುದ್ಧಿಮತ್ತೆ ಬಳಸಿ ಹಣ ಮರುಪಡೆಯುವ ಸೇವೆಗಳು, ಕಾನೂನು ಸಂಸ್ಥೆಗಳು ಮತ್ತು ಅಧಿಕಾರಿಗಳ ಸೋಗು ಹಾಕಿದ್ದವು.
ಈ ಪ್ರಕರಣ ಅಧ್ಯಯನವು ಕೃತಕ ಬುದ್ಧಿಮತ್ತೆಯ ದುರುದ್ದೇಶಪೂರಿತ ಬಳಕೆಗಳನ್ನು ತಡೆಯುವ ಕುರಿತ OpenAI ಯ ಫೆಬ್ರವರಿ 2026ರ(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ವರದಿಯಲ್ಲಿ ಮೂಲತಃ ಪ್ರಕಟವಾಗಿತ್ತು.
ಒಳಗೊಂಡವರು
ವಂಚನೆಯ ಸಂತ್ರಸ್ತರಿಗೆ ಹಣ ಮರುಪಡೆದುಕೊಡುವ ಹೆಸರಿನಲ್ಲಿ ಮೋಸ ಮಾಡುತ್ತಿದ್ದ ChatGPT ಖಾತೆಗಳ ಗುಂಪನ್ನು ನಾವು ನಿಷೇಧಿಸಿದೆವು. ಈ ಖಾತೆಗಳು ನಮ್ಮ ಮಾದರಿಗಳನ್ನು ಬಳಸಿ ಕಾಲ್ಪನಿಕ ಕಾನೂನು ಸಂಸ್ಥೆಗಳಂತೆ ನಟಿಸುತ್ತಿದ್ದವು; ಜೊತೆಗೆ ನೈಜ ವಕೀಲರು ಮತ್ತು ಅಮೆರಿಕದ ಕಾನೂನು ಜಾರಿ ಅಧಿಕಾರಿಗಳ ಸೋಗು ಹಾಕುತ್ತಿದ್ದವು. ಈ ಚಟುವಟಿಕೆ ಕಾಂಬೋಡಿಯಾದಿಂದಲೇ ಆರಂಭವಾಗಿರುವ ಸಾಧ್ಯತೆ ಹೆಚ್ಚಿದೆ. ಆ ದೇಶದಲ್ಲಿ ಚೀನೀಯರ ನೇತೃತ್ವದಲ್ಲಿ ನಡೆಯುತ್ತಿರುವ ಅಪರಾಧಿ ವಂಚನಾ ಕಾರ್ಯಾಚರಣೆಗಳ ಕುರಿತು ಇತ್ತೀಚೆಗೆ ಪ್ರಕಟವಾದ ವರದಿಗಳಿಗೂ ಇದು ತಾಳೆಯಾಗುತ್ತದೆ.
ಕಾರ್ಯವಿಧಾನ
ವಂಚನೆಯಲ್ಲಿ ಕಳೆದುಕೊಂಡ ಹಣವನ್ನು ಮರುಪಡೆದುಕೊಡುವ ಹೆಸರಿನಲ್ಲಿ ನಡೆಯುತ್ತಿದ್ದ ಮೋಸದ ಕಾರ್ಯಾಚರಣೆಗೆ ಈ ಖಾತೆಗಳು ChatGPT ನೆರವು ಪಡೆದವು. ನಕಲಿ ಕಾನೂನು ಸಂಸ್ಥೆಗಳು ಮತ್ತು ನೈಜ ವಕೀಲರು, ಎಫ್‌ಬಿಐನ ಅಂತರ್ಜಾಲ ಅಪರಾಧ ದೂರು ಕೇಂದ್ರ (ಐಸಿ3) ಮುಂತಾದ ವಿಶ್ವಾಸಾರ್ಹ ವ್ಯಕ್ತಿ-ಸಂಸ್ಥೆಗಳ ಸೋಗು ಹಾಕುವುದು ಈ ಕಾರ್ಯಾಚರಣೆಯ ಆಧಾರವಾಗಿತ್ತು.
1. ಮೊದಲ ಸಂಪರ್ಕ: ಕನಿಷ್ಠ ಆರು ನಕಲಿ ಕಾನೂನು ಸಂಸ್ಥೆಗಳಿಂದ ಬಂದಂತೆ ತೋರುವ ವಿಷಯವನ್ನು ಸೃಷ್ಟಿಸಲು ವಂಚಕರು ChatGPT ಬಳಸಿದರು. ಈ ವಿಷಯದ ಕೆಲವು ಭಾಗಗಳನ್ನು ನಂತರ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಆನ್‌ಲೈನ್ ಜಾಹೀರಾತುಗಳ ಮೂಲಕ ಪ್ರಕಟಿಸಲಾಯಿತು. ಅವು ವಂಚನೆಯಲ್ಲಿ ಕಳೆದುಕೊಂಡ ಹಣವನ್ನು ಮರುಪಡೆದುಕೊಡುವ ಕಾಲ್ಪನಿಕ ಸೇವೆಗಳನ್ನು ಪ್ರಚಾರ ಮಾಡುತ್ತಿದ್ದವು. ಈ ಸಂಸ್ಥೆಗಳು ವಂಚಕ ಸಂಸ್ಥೆಗಳೆಂದು ಸಾರ್ವಜನಿಕ ಮೂಲಗಳ ಹಲವು ಸುಳಿವುಗಳು ಸೂಚಿಸಿದವು. ರಾಜ್ಯ ವಕೀಲರ ಪರಿಷತ್ತಿನ ಪರವಾನಗಿಗೆ ಪುರಾವೆ ಇಲ್ಲದಿರುವುದು, ಹೊಂದಿಕೆಯಾಗದ ಜಾಲತಾಣ ಡೊಮೇನ್‌ಗಳ ಬಳಕೆ, ಅಸ್ತಿತ್ವದಲ್ಲೇ ಇಲ್ಲವೆನಿಸುವ ವಿಳಾಸಗಳನ್ನು ಸಂಪರ್ಕ ವಿವರಗಳಲ್ಲಿ ನೀಡಿರುವುದು ಮತ್ತು ಸಂದೇಶ ವಿನಿಮಯ ಅಪ್ಲಿಕೇಶನ್‌ಗಳ ಮೂಲಕ ವಕೀಲರನ್ನು ಸಂಪರ್ಕಿಸಲು ಸೂಚಿಸಿರುವುದು ಇವುಗಳಲ್ಲಿ ಸೇರಿದ್ದವು.

ವಂಚನೆಯಲ್ಲಿ ಕಳೆದುಕೊಂಡ ಹಣವನ್ನು ಮರುಪಡೆದುಕೊಡುವ ನಕಲಿ ಸೇವೆಗಳ ಪ್ರಚಾರಕ್ಕಾಗಿ ವಂಚಕರು ನಮ್ಮ ಮಾದರಿಗಳನ್ನು ಬಳಸಿ ಸಾಮಾಜಿಕ ಮಾಧ್ಯಮ ವಿಷಯವನ್ನು ಸೃಷ್ಟಿಸಿದರು.
2. ವಿಶ್ವಾಸ ಗಳಿಕೆ: ವಂಚನೆಯ ಸಂತ್ರಸ್ತರಿಗೆ ಕಳೆದುಕೊಂಡ ಹಣವನ್ನು ಮರುಪಡೆಯಲು ನೆರವಾಗುವ ಪರಿಣತ ವಕೀಲರ ಧಾಟಿ ಮತ್ತು ವೃತ್ತಿಪರತೆಯನ್ನು ಅನುಕರಿಸುವ ಪ್ರತಿಕ್ರಿಯೆಗಳನ್ನು ಸೃಷ್ಟಿಸಿ, ವಂಚಕರು ತಮ್ಮ ಗುರಿಯಾದವರ ವಿಶ್ವಾಸ ಗಳಿಸಲು ಯತ್ನಿಸಿದರು. ವಕೀಲರೆಂದು ಬಿಂಬಿಸಲಾದ ವ್ಯಕ್ತಿಗಳಿಂದ ಬಂದಂತೆ ತೋರುವ ವಿಷಯವನ್ನು ಅವರು ಸೃಷ್ಟಿಸಿದರು. ಇಂತಹ ಕೆಲವು ವ್ಯಕ್ತಿಗಳ ಪ್ರೊಫೈಲ್‌ಗಳನ್ನು ನಾವು ವಿವಿಧ ಜಾಲತಾಣಗಳಲ್ಲಿ ಗುರುತಿಸಿದೆವು. ಅವರ ಪ್ರೊಫೈಲ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಂಡಿರುವಂತೆ ಅಥವಾ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿರುವಂತೆ ಕಂಡುಬಂದಿತು. ಕೆಲವು ಸಂದರ್ಭಗಳಲ್ಲಿ, ವಂಚಕರು ಕಾನೂನು ಸಂಸ್ಥೆಗಳೆಂದು ಹೇಳಿಕೊಳ್ಳುವ ಹಲವು ಸಂಸ್ಥೆಗಳಲ್ಲಿ ಅದೇ “ವಕೀಲರ” ಗುರುತುಗಳನ್ನು ಮರುಬಳಕೆ ಮಾಡಿದ್ದರು. ನಾವು ಗುರುತಿಸಿದ ಜಾಲತಾಣಗಳಲ್ಲಿ ಒಂದು ಐಸಿ3ಯ ಅಧಿಕೃತ ತಾಣದಂತೆ ಸೋಗು ಹಾಕಿತ್ತು.
ಈ ವಿವಿಧ ವಂಚಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ಸಂಪರ್ಕ ವಿವರಗಳು, ಭೇಟಿ ನೀಡುವವರನ್ನು ಟೆಲಿಗ್ರಾಮ್‌ನಂತಹ ಖಾಸಗಿ ಸಂದೇಶ ವಿನಿಮಯ ಅಪ್ಲಿಕೇಶನ್‌ಗಳಿಗೆ ಕಳುಹಿಸುತ್ತಿದ್ದವು. ಗುರಿಯಾಗಿಸಿಕೊಂಡವರಿಗೆ ಕಳುಹಿಸಲು ChatGPT ಬಳಸಿ ರಚಿಸಿದ ಸಂದೇಶಗಳಲ್ಲಿ, ವಂಚಕರು ತಾವು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿಕೊಂಡರು. ಸಂತ್ರಸ್ತರ ಸಂಪೂರ್ಣ ಹಣವನ್ನು ಯಶಸ್ವಿಯಾಗಿ ಮರುಪಡೆಯುವವರೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದೂ ಹೇಳಿದರು.
3. ಹಣ ವಸೂಲಿ: ಆದರೆ ಯಾವುದೇ ಹಣವನ್ನು “ಮರುಪಡೆಯುವ” ಮೊದಲೇ ಶುಲ್ಕ ಮತ್ತು ಠೇವಣಿಗಳನ್ನು ಕೇಳುವ ಮೂಲಕ ಗುರಿಯಾದವರಿಂದ ಹಣ ಕೀಳಲು ವಂಚಕರು ಯತ್ನಿಸಿದರು. ಮರುಪಡೆಯಲಾಗಿದೆ ಎಂದು ಹೇಳಲಾದ ಹಣವನ್ನು ಸ್ವೀಕರಿಸುವ ಮೊದಲು 15% “ಸೇವಾ ಶುಲ್ಕ” ಪಾವತಿಸಲು ಸೂಚಿಸುವುದು, ಖಾತೆಯನ್ನು ಸಕ್ರಿಯಗೊಳಿಸಲು ಠೇವಣಿ ಕೇಳುವುದು ಮತ್ತು “ಸಮಾಲೋಚನಾ ಶುಲ್ಕ” ವಿಧಿಸುವುದು ಇದರಲ್ಲಿ ಸೇರಿದ್ದವು. ಗುರಿಯಾಗಿಸಿಕೊಂಡವರಿಗೆ ಕಳುಹಿಸಲು ವಂಚಕರು ChatGPT ಬಳಸಿ ರಚಿಸಿದ ಸಂದೇಶಗಳಲ್ಲಿ, ಕ್ರಿಪ್ಟೋಕರೆನ್ಸಿಯಲ್ಲಿ ಪಾವತಿಸುವಂತೆ ಮತ್ತು ಪಾವತಿಯ ಪುರಾವೆಯಾಗಿ ವಹಿವಾಟಿನ ದೃಢೀಕರಣಗಳ ಪರದೆಚಿತ್ರಗಳನ್ನು ನೀಡುವಂತೆ ಸೂಚನೆಗಳಿದ್ದವು.

ಎಫ್‌ಬಿಐನ ಐಸಿ3 ಘಟಕದ ಸೋಗು ಹಾಕಿರುವ, ಈ ವಂಚನೆಗೆ ಸಂಬಂಧಿಸಿದ ಜಾಲತಾಣ. “ದೂರು ಸಲ್ಲಿಸಿ” ಎಂಬುದನ್ನು ಕ್ಲಿಕ್ ಮಾಡಿದಾಗ, ಭೇಟಿ ನೀಡಿದವರು ಅದೇ ಸೋಗಿನ ಟೆಲಿಗ್ರಾಮ್ ಖಾತೆಗೆ ಹೋಗುವಂತಿತ್ತು.
ಕಾರ್ಯಗತಗೊಳಿಸುವಿಕೆ
ಈ ಕಾರ್ಯಾಚರಣೆಯ ಹಲವು ಹಂತಗಳಲ್ಲಿ ನಮ್ಮ ಮಾದರಿಗಳನ್ನು ಬಳಸಲಾಯಿತು. ಸಾಮಾಜಿಕ ಮಾಧ್ಯಮಕ್ಕಾಗಿ ಪ್ರಚಾರ ವಿಷಯ ಸೃಷ್ಟಿಸುವುದು ಮತ್ತು ಗುರಿಯಾಗಿಸಿಕೊಂಡವರಿಗೆ ಯಾವುದೇ ಪೂರ್ವಪರಿಚಯವಿಲ್ಲದೆ ಕಳುಹಿಸುವ ಆರಂಭಿಕ ಸಂದೇಶಗಳನ್ನು ರಚಿಸುವುದು ಇವುಗಳಲ್ಲಿ ಸೇರಿದ್ದವು. ಆದರೆ ವಂಚಕರು ChatGPT ಅನ್ನು ಹೆಚ್ಚಾಗಿ ಬಳಸಿದ್ದು ಖಾಸಗಿ ಸಂದೇಶ ವಿನಿಮಯ ಅಪ್ಲಿಕೇಶನ್‌ಗಳಲ್ಲಿ ಗುರಿಯಾದವರಿಗೆ ಕಳುಹಿಸುವ ಮತ್ತು ಅವರಿಂದ ಬರುವ ಸಂದೇಶಗಳನ್ನು ಅನುವಾದಿಸಲು. “ಅಮೆರಿಕನ್ ಇಂಗ್ಲಿಷ್”ನಲ್ಲಿ ಅಥವಾ ವಕೀಲರ ಶೈಲಿಯಲ್ಲಿ ಉತ್ತರ ಬರೆಯುವಂತೆ ಕೇಳಿದ ವಿನಂತಿಗಳೂ ಇದರಲ್ಲಿ ಸೇರಿದ್ದವು.
ಕೆಲವು ವಂಚಕ ಖಾತೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ದಾರಿತಪ್ಪಿಸುವ ದಾಖಲೆಗಳನ್ನು ಸೃಷ್ಟಿಸಲೂ ನಮ್ಮ ಮಾದರಿಗಳನ್ನು ಬಳಸಿದವು. ಇವುಗಳಲ್ಲಿ ನಕಲಿ ವಕೀಲರ ನೋಂದಣಿ ದಾಖಲೆಗಳು ಮತ್ತು ವಕೀಲರ ಸಂಘದ ನಕಲಿ ಸದಸ್ಯತ್ವ ಕಾರ್ಡ್‌ಗಳು ಸೇರಿದ್ದವು. ಸಂತ್ರಸ್ತರು ಹೊರಗಿನವರ ನೆರವು ಪಡೆಯದಂತೆ ತಡೆಯುವ ಉದ್ದೇಶದ ನಕಲಿ ಗೌಪ್ಯತಾ ಒಪ್ಪಂದಗಳೂ ಇದ್ದವು.

ನಮ್ಮ ಮಾದರಿಗಳನ್ನು ಬಳಸಿ ಸೃಷ್ಟಿಸಿದ ನ್ಯೂಯಾರ್ಕ್ ರಾಜ್ಯ ವಕೀಲರ ಸಂಘದ ನಕಲಿ ಸದಸ್ಯತ್ವ ಕಾರ್ಡ್. ಕೆಲವು ವಿವರಗಳನ್ನು OpenAI ತನಿಖಾಧಿಕಾರಿಗಳು ಮರೆಮಾಚಿದ್ದಾರೆ.
ಪರಿಣಾಮ
ಪರಿಣಾಮವನ್ನು ಅಳೆಯುವಾಗ ಎಚ್ಚರಿಕೆ ಅಗತ್ಯ. ಏಕೆಂದರೆ ವಂಚಕರು ಸ್ವತಃ ನಮೂದಿಸಿದ ಮಾಹಿತಿಯೇ ಸಾಕ್ಷ್ಯಗಳ ಪ್ರಮುಖ ಮೂಲವಾಗಿದೆ. ವಂಚಕರು ಪ್ರತ್ಯೇಕ ಸಂತ್ರಸ್ತರಿಂದ ಸಾವಿರಾರು ಡಾಲರ್‌ಗಳನ್ನು ಮೋಸದಿಂದ ಪಡೆದಿರಬಹುದು ಎಂದು ಆ ಮಾಹಿತಿ ಸೂಚಿಸುತ್ತದೆ. ಆದರೆ ಆ ಹೇಳಿಕೆಗಳನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಿ ದೃಢಪಡಿಸಲು ಸಾಧ್ಯವಾಗಿಲ್ಲ. ಎಫ್‌ಬಿಐ ಮತ್ತು ವಂಚಕರು ಸೋಗು ಹಾಕಿದ್ದ ಕನಿಷ್ಠ ಒಂದು ಕಾನೂನು ಸಂಸ್ಥೆ ಈ ವಂಚನೆಯ ಕುರಿತು ಸಾರ್ವಜನಿಕ ಎಚ್ಚರಿಕೆಗಳನ್ನು ನೀಡಿವೆ. ಈ ಕಾರ್ಯಾಚರಣೆಯು ಸುಲಭವಾಗಿ ಮೋಸಕ್ಕೆ ಒಳಗಾಗಬಹುದಾದವರನ್ನು, ವಿಶೇಷವಾಗಿ ವಯೋವೃದ್ಧರನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಎಫ್‌ಬಿಐ ಅಧಿಕಾರಿಗಳು ಎಚ್ಚರಿಸಿದ್ದಾರೆ. ವಂಚನೆಯ ಸಂತ್ರಸ್ತರ ಭಾವನಾತ್ಮಕ ಸ್ಥಿತಿ ಮತ್ತು ಕಳೆದುಕೊಂಡ ಹಣವನ್ನು ಶೀಘ್ರವಾಗಿ ಮರುಪಡೆಯುವ ಅವರ ಬಯಕೆಯನ್ನು ಇದು ದುರುಪಯೋಗಪಡಿಸಿಕೊಳ್ಳುತ್ತದೆ.
ನಮ್ಮ ಪರಿಕರಗಳಿಂದ ಸೃಷ್ಟಿಯಾದ ವಿಷಯವನ್ನು ಮೋಸ ಅಥವಾ ವಂಚನೆಗಾಗಿ ಬಳಸುವುದನ್ನು OpenAI ನೀತಿಗಳು ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ. ದುರುದ್ದೇಶಪೂರಿತ ನಡವಳಿಕೆಯ ಮೇಲೆ ಕೃತಕ ಬುದ್ಧಿಮತ್ತೆ ಹೇಗೆ ಪ್ರಭಾವ ಬೀರುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳುವ ವಂಚನಾ ಚಟುವಟಿಕೆಗಳನ್ನು ಸಕ್ರಿಯವಾಗಿ ತಡೆಯಲು, ಉದ್ಯಮದ ಇತರ ಸಂಸ್ಥೆಗಳು ಹಾಗೂ ಅಧಿಕಾರಿಗಳೊಂದಿಗೆ ಸಹಕರಿಸಲು ನಾವು ಬದ್ಧರಾಗಿದ್ದೇವೆ.