ರಾಷ್ಟ್ರೀಯ ಭದ್ರತಾ ಆಧುನೀಕರಣದ ಹಿರಿಯ ಸಲಹೆಗಾರರಾಗಿ ಡ್ಯಾನ್ ಡ್ರಿಸ್ಕಾಲ್ ಅವರನ್ನು ನೇಮಿಸಿದ OpenAI
ಡ್ಯಾನ್ ಡ್ರಿಸ್ಕಾಲ್ ಅವರು ರಾಷ್ಟ್ರೀಯ ಭದ್ರತಾ ಆಧುನೀಕರಣದ ಹಿರಿಯ ಸಲಹೆಗಾರರಾಗಿ OpenAI ಸೇರಲಿದ್ದಾರೆ. ಉನ್ನತ AI ಮೂಲಕ ರಾಷ್ಟ್ರೀಯ ಮತ್ತು ಸೈಬರ್ ಭದ್ರತೆಯನ್ನು ಹೇಗೆ ಬಲಪಡಿಸಬಹುದು ಎಂಬುದರ ಕುರಿತು ಹಿರಿಯ ನಾಯಕತ್ವ ಮತ್ತು ಬಾಹ್ಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಾ ಸಲಹೆ ನೀಡಲಿದ್ದಾರೆ. AIಯ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸಲು ಅಮೆರಿಕದ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುವುದಕ್ಕೆ ವಿಶೇಷ ಒತ್ತು ನೀಡಲಿದ್ದಾರೆ.
ಹೊಸದಾಗಿ ಸೃಷ್ಟಿಸಿರುವ ಈ ಹುದ್ದೆಯಲ್ಲಿ, ಡ್ಯಾನ್ ಅವರು OpenAI ತಂಡಗಳು ಹಾಗೂ ಸರ್ಕಾರಗಳು, ಉದ್ಯಮ, ಶೈಕ್ಷಣಿಕ ವಲಯ ಮತ್ತು ಮಿತ್ರ ಸಂಸ್ಥೆಗಳ ನಾಯಕರೊಂದಿಗೆ ಕೆಲಸ ಮಾಡಲಿದ್ದಾರೆ. ಪ್ರಜಾಸತ್ತಾತ್ಮಕ AI ನ ನಿರ್ಮಾಣಕ್ಕೆ ಬೆಂಬಲವಾಗುವ ಪ್ರಾಯೋಗಿಕ ಆಧುನೀಕರಣ ಉಪಕ್ರಮಗಳನ್ನು ಮುನ್ನಡೆಸಲಿದ್ದಾರೆ. ವಿಶ್ವದಾದ್ಯಂತದ ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ಕಾರ್ಯಾಚರಣೆಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು OpenAI ನ ಆಂತರಿಕ ತಂಡಗಳಿಗೆ ಅವರು ನೆರವಾಗಲಿದ್ದಾರೆ.
ಡ್ಯಾನ್ ಅವರು ಈ ಹಿಂದೆ ಅಮೆರಿಕದ 26ನೇ ಸೇನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಸೇನೆಯ ಕಾರ್ಯಾಚರಣೆಗಳು, ಆಧುನೀಕರಣ ಮತ್ತು ಸಂಪನ್ಮೂಲಗಳ ಮೇಲ್ವಿಚಾರಣೆ ನಡೆಸಿದ್ದರು. ಅವರಿಗೆ ಸೇನಾ ಸೇವೆ, ಸರ್ಕಾರದ ಉನ್ನತ ನಾಯಕತ್ವ ಮತ್ತು ಖಾಸಗಿ ವಲಯದಲ್ಲಿ ಅನುಭವವಿದೆ.
ಈ ಹುದ್ದೆಯಲ್ಲಿ ಡ್ಯಾನ್ ಅವರು ನಮ್ಮ ಸಾರ್ವಜನಿಕ ಮತ್ತು ಖಾಸಗಿ ವಲಯದ ಪಾಲುದಾರರಿಗೆ ನೀತಿ ಮತ್ತು ಕಾರ್ಯತಂತ್ರದ ಆಯ್ಕೆಗಳನ್ನು ಆಧುನೀಕರಿಸುವ ಕುರಿತು ಸಲಹೆ ನೀಡಲಿದ್ದಾರೆ. ರಾಷ್ಟ್ರೀಯ ಭದ್ರತೆಯನ್ನು ಸುಧಾರಿಸಲು AI ನ ಪ್ರಾಯೋಗಿಕ ಬಳಕೆಗಳಿಗೆ ಅವಕಾಶ ಕಲ್ಪಿಸುವುದು ಮತ್ತು ಜಗತ್ತು ಪ್ರಜಾಸತ್ತಾತ್ಮಕ ತತ್ವಗಳನ್ನು ಬೆಂಬಲಿಸುವ AI ಅನ್ನು ನಿರ್ಮಿಸುವಂತೆ ನೋಡಿಕೊಳ್ಳಲು ನೆರವಾಗುವುದು ಇದರ ಉದ್ದೇಶವಾಗಿದೆ. ಕಾರ್ಯಾಚರಣೆಯ ಅಗತ್ಯಗಳು, ಸಾಂಸ್ಥಿಕ ಬದಲಾವಣೆ ಮತ್ತು ಹೊಸದಾಗಿ ರೂಪುಗೊಳ್ಳುತ್ತಿರುವ AI ಸಾಮರ್ಥ್ಯಗಳನ್ನು ಎಲ್ಲಿ ಒಗ್ಗೂಡಿಸಬಹುದು ಎಂಬುದನ್ನು ಗುರುತಿಸಲು ಅವರು ಕೆಲಸ ಮಾಡಲಿದ್ದಾರೆ. ಸಾಮೂಹಿಕ ಭದ್ರತೆಯನ್ನು ಬಲಪಡಿಸಲು ಪ್ರಜಾಸತ್ತಾತ್ಮಕ ಸಂಸ್ಥೆಗಳು ಉನ್ನತ AI ಅನ್ನು ಜವಾಬ್ದಾರಿಯುತವಾಗಿ ಬಳಸುವಂತೆ ನೆರವಾಗುವ ನಮ್ಮ ಬದ್ಧತೆಯನ್ನು ಡ್ಯಾನ್ ಅವರ ನೇಮಕಾತಿ ಪ್ರತಿಬಿಂಬಿಸುತ್ತದೆ. ಸೈಬರ್ ದಾಳಿಗಳನ್ನು ತಡೆದುಕೊಂಡು ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಅಗತ್ಯ ಸೇವೆಗಳನ್ನು ರಕ್ಷಿಸಲು OpenAI ತನ್ನ Daybreakಕಾರ್ಯಕ್ರಮದಡಿ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ನಡೆಸುತ್ತಿರುವ ಕೆಲಸವನ್ನು ಇದು ಇನ್ನಷ್ಟು ಮುಂದುವರಿಸುತ್ತದೆ.
ಡ್ಯಾನ್ ಡ್ರಿಸ್ಕಾಲ್ ಅವರು ಅಮೆರಿಕದ 26ನೇ ಸೇನಾ ಕಾರ್ಯದರ್ಶಿಯಾಗಿದ್ದರು. ಕಾರ್ಯದರ್ಶಿಯಾಗಿ ಅವರು ಸಕ್ರಿಯ ಸೇವೆ, ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ಮೀಸಲು ಪಡೆಗಳ ಸುಮಾರು ಹತ್ತು ಲಕ್ಷ ಸೈನಿಕರು ಹಾಗೂ 265,000 ಕ್ಕೂ ಹೆಚ್ಚಿನ ಸೇನಾ ನಾಗರಿಕ ಸಿಬ್ಬಂದಿಗೆ ಸಂಬಂಧಿಸಿದ ಕಾರ್ಯಾಚರಣೆಗಳು, ಆಧುನೀಕರಣ ಮತ್ತು ಸಂಪನ್ಮೂಲ ಹಂಚಿಕೆಯ ಮೇಲ್ವಿಚಾರಣೆ ನಡೆಸಿದ್ದರು. ಹೊಸ ತಂತ್ರಜ್ಞಾನವನ್ನು ಕಾರ್ಯಾಚರಣೆಯಲ್ಲಿ ತ್ವರಿತವಾಗಿ ಬಳಕೆಗೆ ತರುವುದು, ಖರೀದಿ ಪ್ರಕ್ರಿಯೆಯನ್ನು ಸುಧಾರಿಸುವುದು ಮತ್ತು ಹೆಚ್ಚು ಸಮರ್ಥವಾದ ಪಡೆಯನ್ನು ನಿರ್ಮಿಸುವುದಕ್ಕೆ ಒತ್ತು ನೀಡಿ, ಅವರು ಸೇನೆಯ ಪರಿವರ್ತನೆಯನ್ನು ಮುನ್ನಡೆಸಿದ್ದರು. ಮಾಜಿ ಸೇನಾಧಿಕಾರಿ ಮತ್ತು ಉದ್ಯಮ ನಾಯಕರಾದ ಡ್ಯಾನ್ ಅವರಿಗೆ ಸೇನಾ ಸೇವೆ, ಕಾನೂನು ಮತ್ತು ಖಾಸಗಿ ವಲಯದಲ್ಲಿ ಅನುಭವವಿದೆ.


