OpenAI

ನಿಯಂತ್ರಣ ಕೊಠಡಿ

ಲೋಡ್ ಆಗುತ್ತಿದೆ…

ನಮ್ಮ ಮಾಡೆಲ್‌ಗಳು ಹೆಚ್ಚು ಶಕ್ತಿಶಾಲಿಯಾದಂತೆ, ಅವುಗಳಿಗೆ ಸಂಬಂಧಿಸಿದ ಸುರಕ್ಷತೆ ಮತ್ತು ಭದ್ರತಾ ಅಪಾಯಗಳೂ ಹೆಚ್ಚುತ್ತವೆ. ಹೀಗಾಗಿ, ಸಂಭಾವ್ಯ ಸಮಸ್ಯೆಗಳನ್ನು ಪತ್ತೆಹಚ್ಚುವುದು ಮತ್ತು ಅಗತ್ಯವಿದ್ದಾಗ ಮಾಡೆಲ್‌ಗಳನ್ನು ತ್ವರಿತವಾಗಿ ನಿಲ್ಲಿಸುವುದು ಇನ್ನಷ್ಟು ನಿರ್ಣಾಯಕವಾಗುತ್ತದೆ. ಈ ಅಗತ್ಯವನ್ನು ಪೂರೈಸಲು ನಾವು ನಿಯಂತ್ರಣ ಕೊಠಡಿಯನ್ನು ನಿರ್ಮಿಸಿದ್ದೇವೆ.

ನಿಯಂತ್ರಣ ಕೊಠಡಿಯು ನಮ್ಮ ಸಂಶೋಧನಾ ಮೂಲಸೌಕರ್ಯದಾದ್ಯಂತ ಮಾಡೆಲ್ ವರ್ಕ್‌ಲೋಡ್‌ಗಳ ಮೇಲೆ ನಿಗಾ ಇಡುವ ಕೇಂದ್ರೀಯ ವ್ಯವಸ್ಥೆ. ಸುರಕ್ಷತೆ ಅಥವಾ ಭದ್ರತೆಯ ಬಗ್ಗೆ ಆತಂಕಗಳು ಉಂಟಾದಾಗ ಅವುಗಳನ್ನು ಇದು ತ್ವರಿತವಾಗಿ ನಿಲ್ಲಿಸುತ್ತದೆ. ಮಾಡೆಲ್ ತರಬೇತಿ ಮತ್ತು ಮೌಲ್ಯಮಾಪನಕ್ಕಾಗಿ ಏಜೆಂಟ್ ಆಧಾರಿತ ಮಾದರಿ ಆಯ್ಕೆ, ಡೇಟಾ ಸಂಸ್ಕರಣೆ ಮುಂತಾದವು ಸೇರಿದಂತೆ ಪ್ರತಿ ಸಂಶೋಧನಾ ಇನ್‌ಫರೆನ್ಸ್ ವರ್ಕ್‌ಲೋಡ್‌ಗಳನ್ನೂ ಇದು ಸಂಪರ್ಕಿಸುತ್ತದೆ. ಇದು ನಮ್ಮ ಉದ್ದೇಶಗಳಿಗೆ ಹೊಂದಿಕೆಯಾಗದ ನಡವಳಿಕೆಯ ಮೇಲ್ವಿಚಾರಣಾ ವ್ಯವಸ್ಥೆಗಳೊಂದಿಗೆ ಕೆಲಸ ಮಾಡುತ್ತದೆ. ಮಧ್ಯಪ್ರವೇಶಿಸಿ ಕಾರ್ಯವನ್ನು ನಿಲ್ಲಿಸಲು ಅಥವಾ ವಿರಾಮಗೊಳಿಸಲು ನಿರ್ಧರಿಸಿದ 35 ಸೆಕೆಂಡುಗಳೊಳಗೆ ಮಾಡೆಲ್ ಫಲಿತಾಂಶ ನೀಡುವುದನ್ನು ತಡೆಯುತ್ತದೆ. ಇತರ ವ್ಯವಸ್ಥೆಗಳು ವಿಫಲವಾದರೂ ಇದು ಕೆಲಸ ಮುಂದುವರಿಸುವಂತೆ, ಮತ್ತು ನಿಯಂತ್ರಣ ಕೊಠಡಿಯೇ ಸ್ಥಗಿತಗೊಂಡರೆ ಮಾಡೆಲ್ ಫಲಿತಾಂಶ ನೀಡುವುದನ್ನು ನಿಲ್ಲಿಸುವಂತೆ ಇದನ್ನು ನಿರ್ಮಿಸಲಾಗಿದೆ.

ಅಗತ್ಯ ಅತಿ ಹೆಚ್ಚಿರುವ ನಮ್ಮ ಸಂಶೋಧನಾ ಮೂಲಸೌಕರ್ಯದಾದ್ಯಂತ ನಿಯಂತ್ರಣ ಕೊಠಡಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಬಾಹ್ಯ ಬಳಕೆದಾರರಿಗೆ ಮಾಡೆಲ್ ಸೇವೆ ಒದಗಿಸುವ ನಮ್ಮ ತಂತ್ರಜ್ಞಾನ ವ್ಯವಸ್ಥೆ ಸ್ವಭಾವತಃ ಈಗಾಗಲೇ ಹೆಚ್ಚು ಕೇಂದ್ರೀಕೃತವಾಗಿದೆ. ಅಗತ್ಯವಿದ್ದರೆ ಮಾಡೆಲ್ ನಿಯೋಜನೆಗಳನ್ನು ತ್ವರಿತವಾಗಿ ಸ್ಥಗಿತಗೊಳಿಸುವ ಸುಧಾರಿತ ಕಾರ್ಯಾಚರಣಾ ಸಾಮರ್ಥ್ಯವೂ ಅದಕ್ಕಿದೆ.

ಇದು ಹೇಗೆ ಕೆಲಸ ಮಾಡುತ್ತದೆ

ವರ್ಕ್‌ಲೋಡ್, ಇನ್‌ಫರೆನ್ಸ್ ಎಂಜಿನ್ ಮತ್ತು ಕೇಂದ್ರೀಕೃತ ನಿಯಂತ್ರಣ ಕೊಠಡಿ ಸೇವೆ ಎಂಬ ಕೆಲವು ವ್ಯವಸ್ಥೆಗಳನ್ನು ಸಂಯೋಜಿಸುವ ಮೂಲಕ ನಿಯಂತ್ರಣ ಕೊಠಡಿ ಕೆಲಸ ಮಾಡುತ್ತದೆ.

  • ವರ್ಕ್‌ಲೋಡ್ ಎಂದರೆ ನಡೆಯುತ್ತಿರುವ ಕಾರ್ಯ. ಉದಾಹರಣೆಗೆ, ರೀಇನ್‌ಫೋರ್ಸ್‌ಮೆಂಟ್ ಲರ್ನಿಂಗ್ ಪ್ರಯೋಗ, ಮೌಲ್ಯಮಾಪನ, ದೊಡ್ಡ ಪ್ರಮಾಣದ ಮಾದರಿ ಆಯ್ಕೆ ಅಥವಾ ಡೇಟಾ ಸಂಸ್ಕರಣೆಯ ಕಾರ್ಯ. ಏಜೆಂಟ್ ಆಧಾರಿತ ಇನ್‌ಫರೆನ್ಸ್ ನಡೆಸುವ ಪ್ರತಿಯೊಂದು ಸಂಶೋಧನಾ ವರ್ಕ್‌ಲೋಡ್‌ಗೂ ಅನುಮೋದಿತ ಸುರಕ್ಷತಾ ಸಮರ್ಥನೆಯೊಂದಿಗೆ ಸಂಬಂಧ ಹೊಂದಿರಬೇಕೆಂದು ನಾವು ಕಡ್ಡಾಯಗೊಳಿಸಿದ್ದೇವೆ.

  • ಇನ್‌ಫರೆನ್ಸ್ ಎಂಜಿನ್, ಅಥವಾ ಸಂಕ್ಷಿಪ್ತವಾಗಿ ಎಂಜಿನ್, ಎಂದರೆ ಮಾಡೆಲ್ ಸ್ವತಃ. GPU ಗಳಲ್ಲಿ ನೇರವಾಗಿ ಚಾಲನೆಯಾಗುವ ಎಂಜಿನ್ ಅನ್ನು ಮಾಡೆಲ್‌ನ ಮೆದುಳು ಎಂದು ಭಾವಿಸಬಹುದು. ಒಂದು ವರ್ಕ್‌ಲೋಡ್ ಸಾಮಾನ್ಯವಾಗಿ ಒಂದು ಅಥವಾ ಹೆಚ್ಚಿನ ಮಾಡೆಲ್‌ಗಳನ್ನು ಬಳಸುತ್ತದೆ. ಅವು ಒಂದು ಅಥವಾ ಹಲವು ಪ್ರತ್ಯೇಕ ಇನ್‌ಫರೆನ್ಸ್ ಎಂಜಿನ್‌ಗಳಲ್ಲಿ ಚಾಲನೆಯಲ್ಲಿರಬಹುದು. ಒಂದೇ ಇನ್‌ಫರೆನ್ಸ್ ಎಂಜಿನ್ ಅನ್ನು ಒಂದಕ್ಕಿಂತ ಹೆಚ್ಚು ವರ್ಕ್‌ಲೋಡ್‌ಗಳು ಬಳಸಬಹುದು.

  • ನಿಯಂತ್ರಣ ಕೊಠಡಿ ಸೇವೆ ಕಾರ್ಯಗಳ ಮೇಲೆ ನಿಗಾ ಇಡುತ್ತದೆ ಮತ್ತು ಅವು ಮಾಡೆಲ್ ಫಲಿತಾಂಶವನ್ನು ಉತ್ಪಾದಿಸುವುದನ್ನು ಮುಂದುವರಿಸಲು ಅನುಮತಿಸಬೇಕೇ ಎಂಬುದನ್ನು ನಿಯಂತ್ರಿಸುತ್ತದೆ. ವಿನಂತಿಯನ್ನು ಪೂರೈಸುವ ಮೊದಲು ಎಂಜಿನ್‌ಗಳು ನಿಯಂತ್ರಣ ಕೊಠಡಿ ಸೇವೆಯೊಂದಿಗೆ ಪರಿಶೀಲಿಸುತ್ತವೆ. ಕಾರ್ಯವನ್ನು ನಿಲ್ಲಿಸಿದ್ದರೆ, ಸೇವೆಯು ವಿನಂತಿಯನ್ನು ನಿರಾಕರಿಸಿ, ಹೆಚ್ಚಿನ ಫಲಿತಾಂಶ ಉತ್ಪಾದನೆಯನ್ನು ತಡೆಯುತ್ತದೆ.

ನಿಯಂತ್ರಣ ಕೊಠಡಿಯನ್ನು ಈ ರೀತಿಯಾಗಿ ಸಂಯೋಜಿಸಲಾಗಿದೆ:

  • ಹೊಸ ಕಾರ್ಯವನ್ನು ಪ್ರಾರಂಭಿಸುವಾಗ, ವರ್ಕ್‌ಲೋಡ್ ಕೋಡ್ ನಿಯಂತ್ರಣ ಕೊಠಡಿಯಿಂದ ಹೊಸ job_id ಅನ್ನು ಕೋರುತ್ತದೆ.

  • ವರ್ಕ್‌ಲೋಡ್‌ಗೆ ಮಾಡೆಲ್‌ನಿಂದ ಟೋಕನ್‌ಗಳನ್ನು ಆಯ್ಕೆ ಮಾಡಬೇಕಾದಾಗಲೆಲ್ಲ, ಆ ಮಾಡೆಲ್ ಅನ್ನು ಚಾಲನೆ ಮಾಡುವ ಇನ್‌ಫರೆನ್ಸ್ ಎಂಜಿನ್‌ಗೆ job_id ಜೊತೆಗೆ ವಿನಂತಿಯನ್ನು ಕಳುಹಿಸುತ್ತದೆ. ಆ ವಿನಂತಿಯನ್ನು ಪೂರೈಸಲು ಎಂಜಿನ್ ನಿಯಂತ್ರಣ ಕೊಠಡಿಯಿಂದ ಅನುಮತಿ ಕೋರುತ್ತದೆ. ಜೊತೆಗೆ job_id ಅನ್ನು ನಿಯಂತ್ರಣ ಕೊಠಡಿಗೆ ಕಳುಹಿಸುತ್ತದೆ.

  • ಆ ಕಾರ್ಯವನ್ನು ಕೊನೆಗೊಳಿಸಲಾಗಿದೆಯೇ ಎಂದು ನಿಯಂತ್ರಣ ಕೊಠಡಿ ಪರಿಶೀಲಿಸುತ್ತದೆ. ಕೊನೆಗೊಳಿಸಿದ್ದರೆ, ಇನ್‌ಫರೆನ್ಸ್ ವಿನಂತಿಯನ್ನು ನಿರಾಕರಿಸುತ್ತದೆ. ಎಂಜಿನ್ ವರ್ಕ್‌ಲೋಡ್ ಇನ್‌ಫರೆನ್ಸ್ ವಿನಂತಿಗೆ ನಿರಾಕರಣೆಯ ಪ್ರತಿಕ್ರಿಯೆ ನೀಡುತ್ತದೆ. ಇದರಿಂದ ಆ ಕಾರ್ಯಕ್ಕಾಗಿ ಮಾಡೆಲ್ ಹೆಚ್ಚಿನ ಫಲಿತಾಂಶ ಉತ್ಪಾದಿಸುವುದು ನಿಲ್ಲುತ್ತದೆ.

ನಿಯಂತ್ರಣ ಕೊಠಡಿ ಹೇಗೆ ಕೆಲಸ ಮಾಡುತ್ತದೆ

ಸಂಶೋಧಕರು

ಸಂಶೋಧನಾ ಕಾರ್ಯ

<No job ID yet>

ಇನ್‌ಫರೆನ್ಸ್ ಎಂಜಿನ್

ಜಿಪಿಯುಗಳಲ್ಲಿ ಮಾಡೆಲ್ ಅನ್ನು ಚಾಲನೆ ಮಾಡುತ್ತದೆ

ನಿಯಂತ್ರಣ ಕೊಠಡಿ

  • job_039, ಸಕ್ರಿಯವಾಗಿದೆ
  • job_040, ಸಕ್ರಿಯವಾಗಿದೆ
  • job_041, ಸಕ್ರಿಯವಾಗಿದೆ
ಹಂತ 1

ಸಂಶೋಧಕರು ಕಾರ್ಯವೊಂದನ್ನು ಪ್ರಾರಂಭಿಸಲು ನಿರ್ಧರಿಸುತ್ತಾರೆ

ಸಂಶೋಧಕರು ಒಂದು ಕಾರ್ಯವನ್ನು ಪ್ರಾರಂಭಿಸುವುದರೊಂದಿಗೆ ಈ ಪ್ರಕ್ರಿಯೆ ಆರಂಭವಾಗುತ್ತದೆ. ಉದಾಹರಣೆಗೆ, ಒಂದು ಪ್ರಯೋಗ ಅಥವಾ ಮೌಲ್ಯಮಾಪನ.

ಉದಾಹರಣೆ: ಮೇಲ್ವಿಚಾರಣೆಯ ಎಚ್ಚರಿಕೆಗೆ ಪ್ರತಿಕ್ರಿಯಿಸುವುದು

ನಮ್ಮ ಎಲ್ಲ ಅತ್ಯಾಧುನಿಕ ರೀಇನ್‌ಫೋರ್ಸ್‌ಮೆಂಟ್ ಲರ್ನಿಂಗ್ ಕಾರ್ಯಗಳು ಮೇಲ್ವಿಚಾರಕದೊಂದಿಗೆ ನಡೆಯುತ್ತವೆ. ಮೇಲ್ವಿಚಾರಕ ಎಂದರೆ ಮತ್ತೊಂದು ಮಾಡೆಲ್. ತರಬೇತಿ ಪಡೆಯುತ್ತಿರುವ ಮಾಡೆಲ್ ಮಾಡುವ ಎಲ್ಲವನ್ನೂ ಇದು ಪರಿಶೀಲಿಸುತ್ತದೆ ಮತ್ತು ಸಮಸ್ಯೆ ಕಂಡುಬಂದರೆ ಎಚ್ಚರಿಕೆ ನೀಡುತ್ತದೆ. ಉದಾಹರಣೆಗೆ, ನಮ್ಮ ಇತ್ತೀಚಿನ ಡಿಎನ್ಎಸ್‌ಗೆ ಸಂಬಂಧಿಸಿದ ಘಟನೆಯನ್ನು⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಮೇಲ್ವಿಚಾರಕವೊಂದು ಪತ್ತೆಹಚ್ಚಿತು.

ನಿಯಂತ್ರಣ ಕೊಠಡಿ ಮತ್ತು ನಮ್ಮ ಮೇಲ್ವಿಚಾರಣಾ ವ್ಯವಸ್ಥೆಯನ್ನು ಈ ರೀತಿಯಾಗಿ ಸಂಯೋಜಿಸಲಾಗಿದೆ:

  • ಮೇಲ್ವಿಚಾರಣಾ ವ್ಯವಸ್ಥೆಯು ಸಂಭಾವ್ಯ ಸಮಸ್ಯೆಯನ್ನು ಪತ್ತೆಹಚ್ಚಿದರೆ, ಅದರ ವಿವರಗಳು ಮತ್ತು ತೀವ್ರತೆಯನ್ನು ಆಧರಿಸಿ ಕಾರ್ಯವನ್ನು ನಿಲ್ಲಿಸಲು ನಿರ್ಧರಿಸಬಹುದು.

  • ಈ ಸಂದರ್ಭದಲ್ಲಿ, ಮೇಲ್ವಿಚಾರಣಾ ವ್ಯವಸ್ಥೆಯು ಕಾರ್ಯವನ್ನು ನಿಲ್ಲಿಸುವಂತೆ ನಿಯಂತ್ರಣ ಕೊಠಡಿಗೆ ಸಂದೇಶ ಕಳುಹಿಸುತ್ತದೆ. ಜೊತೆಗೆ job_id ಅನ್ನು ರವಾನಿಸುತ್ತದೆ. ಕಾರ್ಯವನ್ನು ಕೊನೆಗೊಳಿಸಲಾಗಿದೆ ಎಂದು ನಿಯಂತ್ರಣ ಕೊಠಡಿ ದಾಖಲಿಸುತ್ತದೆ.

  • ಮುಂದಿನ ಬಾರಿ ಆ job_id ಹೊಂದಿರುವ ಕಾರ್ಯವು ಯಾವುದೇ ಎಂಜಿನ್‌ನಲ್ಲಿ ಚಾಲನೆಯಲ್ಲಿರುವ ಯಾವುದೇ ಮಾಡೆಲ್‌ನಿಂದ ಹೆಚ್ಚಿನ ಟೋಕನ್‌ಗಳನ್ನು ಆಯ್ಕೆ ಮಾಡಲು ಇನ್‌ಫರೆನ್ಸ್ ವಿನಂತಿ ಕಳುಹಿಸಿದಾಗ, ಅದನ್ನು ನಿರಾಕರಿಸಲಾಗುತ್ತದೆ. ಇದರಿಂದ ಮಾಡೆಲ್ ಹೆಚ್ಚಿನ ಫಲಿತಾಂಶ ನೀಡುವುದು ನಿಲ್ಲುತ್ತದೆ.

ವೇಗ ಮತ್ತು ವಿಶ್ವಾಸಾರ್ಹತೆ

ಕಾರ್ಯವನ್ನು ನಿಲ್ಲಿಸುವ ಸೂಚನೆ ನಿಯಂತ್ರಣ ಕೊಠಡಿಗೆ ತಲುಪಿದ ಕ್ಷಣದಿಂದ, ಆ ಕಾರ್ಯವು ಮುಂದೆ ಸಾಗಲು ಸಾಧ್ಯವಾಗದ ಸ್ಥಿತಿಗೆ ಬರುವವರೆಗಿನ ಗರಿಷ್ಠ ಅವಧಿ 35 ಸೆಕೆಂಡುಗಳು. ಅಗತ್ಯ ಪ್ರಮಾಣದ ಟ್ರಾಫಿಕ್ ಅನ್ನು ನಿಭಾಯಿಸಲು, ಇನ್‌ಫರೆನ್ಸ್‌ಗೆ ಅನುಮತಿ ನೀಡುವ ವ್ಯವಸ್ಥೆಯಲ್ಲಿನ ಕ್ಯಾಶಿಂಗ್ ಪದರದಿಂದ ಈ 35 ಸೆಕೆಂಡುಗಳ ವಿಳಂಬ ಉಂಟಾಗುತ್ತದೆ. ಕಾರ್ಯಗಳನ್ನು ತಕ್ಷಣವೇ ಕೊನೆಗೊಳಿಸಲು ಸಾಧ್ಯವಾಗುವಂತೆ ಈ ಅವಧಿಯನ್ನು ಶೂನ್ಯಕ್ಕೆ ಇಳಿಸಲು ನಾವು ಕೆಲಸ ಮಾಡುತ್ತಿದ್ದೇವೆ.

ಪ್ರಯೋಗಗಳು, ಮೌಲ್ಯಮಾಪನ ಕಾರ್ಯಗಳು ಮುಂತಾದ ವರ್ಕ್‌ಲೋಡ್‌ಗಳ ಉಸ್ತುವಾರಿ ಮತ್ತು ನಿರ್ವಹಣೆ ಸಾಮಾನ್ಯವಾಗಿ ಸಂಶೋಧಕರು ಅಥವಾ ಸಂಶೋಧನಾ ತಂಡಗಳ ಕೈಯಲ್ಲಿರುತ್ತದೆ. ಹೀಗಾಗಿ, ವರ್ಕ್‌ಲೋಡ್ ಕೋಡ್ ಆಗಾಗ ಬದಲಾಗುತ್ತದೆ. ಆದ್ದರಿಂದ ವ್ಯವಸ್ಥೆಯ ಸುರಕ್ಷತೆಗೆ ಆಧಾರವಾಗಿರುವ ನಿರ್ಣಾಯಕ ರಕ್ಷಣೆಗಳನ್ನು ಅಳವಡಿಸಲು ಇದು ಸೂಕ್ತ ಸ್ಥಳವಲ್ಲ. ಈ ಕಾರಣದಿಂದ, ವರ್ಕ್‌ಲೋಡ್ ಕೋಡ್‌ನಲ್ಲಿ ದೋಷಗಳಿದ್ದರೂ ಅಥವಾ ಅದು ಸರಿಯಾಗಿ ಕೆಲಸ ಮಾಡದಿದ್ದರೂ ನಮ್ಮ ವ್ಯವಸ್ಥೆ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಿದ್ದೇವೆ.

ಕಾರ್ಯವನ್ನು ಕೊನೆಗೊಳಿಸುವ ವ್ಯವಸ್ಥೆಯನ್ನು ಇನ್‌ಫರೆನ್ಸ್ ಪದರದಲ್ಲಿ ಅಳವಡಿಸುವ ಮೂಲಕ ನಾವು ಇದನ್ನು ಸಾಧಿಸುತ್ತೇವೆ. ವರ್ಕ್‌ಲೋಡ್‌ ಕೋಡ್‌ನಲ್ಲಿ ಬಹಳ ವೈವಿಧ್ಯವಿದ್ದು, ಅದರ ನಿರ್ವಹಣೆ ವಿಕೇಂದ್ರೀಕೃತವಾಗಿದೆ. ಇದಕ್ಕೆ ವಿರುದ್ಧವಾಗಿ, OpenAI ಸಂಶೋಧನೆಯಾದ್ಯಂತ ಬಳಕೆಯಲ್ಲಿರುವ ಇನ್‌ಫರೆನ್ಸ್ ಕೋಡ್ ಪಾಥ್‌ಗಳು ತೀರಾ ಕಡಿಮೆ. ಅವುಗಳ ನಿಯೋಜನೆಗಳೂ ಹೆಚ್ಚು ಕೇಂದ್ರೀಕೃತವಾಗಿದ್ದು, ಏಕರೂಪದಲ್ಲಿವೆ. ಹೀಗಾಗಿ, ಇನ್‌ಫರೆನ್ಸ್ ಪದರವು ಎಲ್ಲವೂ ಹಾದುಹೋಗಲೇಬೇಕಾದ ನಿಯಂತ್ರಣ ಬಿಂದುವಾಗಿ ಕೆಲಸ ಮಾಡಬಹುದು. ಸಂಶೋಧನೆಯಲ್ಲಿ ನಡೆಯುವ ಎಲ್ಲ ಮಾಡೆಲ್ ಇನ್‌ಫರೆನ್ಸ್ ಪ್ರಕ್ರಿಯೆಗಳ ಪ್ರತಿಯೊಂದು ವಿನಂತಿಯೂ ನಿಯಂತ್ರಣ ಕೊಠಡಿಯ ಅನುಮತಿ ಪರಿಶೀಲನೆಗೆ ಒಳಪಡುತ್ತದೆ ಎಂಬ ದೃಢ ಭರವಸೆ ಇದರಿಂದ ಸಿಗುತ್ತದೆ. ಬಳಕೆದಾರರು ಆಕಸ್ಮಿಕವಾಗಿ ಅಥವಾ ದುರುದ್ದೇಶದಿಂದ, ನಿಯಂತ್ರಣ ಕೊಠಡಿಯನ್ನು ಅಳವಡಿಸದ ಅಥವಾ ನಿಷ್ಕ್ರಿಯಗೊಳಿಸಿದ ಅನಧಿಕೃತ ಎಂಜಿನ್‌ಗಳನ್ನು ರನ್‌ ಮಾಡುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಲು ನಾವು ಏಜೆಂಟ್‌ಗಳು ಮತ್ತು ಪ್ರೋಗ್ರಾಂಗಳ ಮೂಲಕ ನಿರಂತರ ಪರಿಶೀಲನೆಗಳನ್ನೂ ನಡೆಸುತ್ತೇವೆ.

ಕೊನೆಯದಾಗಿ, ನಮ್ಮ ವ್ಯವಸ್ಥೆಯು “ವಿಫಲವಾದಾಗಲೂ ನಿರ್ಬಂಧಿಸುತ್ತದೆ”. ಅಂದರೆ, ವ್ಯವಸ್ಥೆಯ ದೋಷದಿಂದಾಗಲಿ, ದುರುದ್ದೇಶದ ವ್ಯಕ್ತಿಯ ಹಸ್ತಕ್ಷೇಪ ಸೇರಿದಂತೆ ಬೇರೆ ಯಾವುದೇ ಕಾರಣದಿಂದ ಅದನ್ನು ನಿಷ್ಕ್ರಿಯಗೊಳಿಸಿದ್ದರಿಂದಾಗಲಿ ನಿಯಂತ್ರಣ ಕೊಠಡಿ ಸೇವೆ ಸ್ಥಗಿತಗೊಂಡರೆ, ಅದು ಸಾಮಾನ್ಯ ಕಾರ್ಯಾಚರಣೆಗೆ ಮರಳುವವರೆಗೆ ಎಲ್ಲ ಇನ್‌ಫರೆನ್ಸ್ ವಿನಂತಿಗಳನ್ನು ನಿರಾಕರಿಸುವಂತೆ ಎಂಜಿನ್‌ಗಳಲ್ಲಿ ನಿಯಂತ್ರಣ ಕೊಠಡಿಯ ಸಂಯೋಜನೆಯನ್ನು ಹೊಂದಿಸಲಾಗಿದೆ. ವಿಫಲವಾದಾಗಲೂ ನಿರ್ಬಂಧಿಸುವ ಈ ವ್ಯವಸ್ಥೆಯನ್ನು ಈಗ ಎಲ್ಲ ಅತ್ಯಾಧುನಿಕ ಮಾಡೆಲ್ ಸಂಶೋಧನಾ ವರ್ಕ್‌ಲೋಡ್‌ಗಳಿಗೆ ಅಳವಡಿಸಲಾಗಿದೆ. ಉಳಿದ ಎಲ್ಲ ಸಂಶೋಧನಾ ವರ್ಕ್‌ಲೋಡ್‌ಗಳಿಗೆ ಇದನ್ನು ಅಳವಡಿಸುವ ಕೆಲಸ ಮುಂದಿನ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.


ಅತ್ಯಾಧುನಿಕ ಮಾಡೆಲ್‌ಗಳ ಸುರಕ್ಷಿತ ತರಬೇತಿ ಮತ್ತು ನಿಯೋಜನೆಗಾಗಿ ನಾವು ಅನುಸರಿಸುವ ಸಮಗ್ರ ವಿಧಾನದ ಒಂದು ಭಾಗ ಮಾತ್ರ ನಿಯಂತ್ರಣ ಕೊಠಡಿ. ಉದ್ದೇಶಗಳಿಗೆ ಹೊಂದಿಕೆಯಾಗದ ನಡವಳಿಕೆ ಮತ್ತು ಭದ್ರತಾ ಉಲ್ಲಂಘನೆಗಳ ಮೇಲ್ವಿಚಾರಣೆಯಲ್ಲಿ ಹೂಡಿಕೆ ಮಾಡುವುದರ ಜೊತೆಗೆ, ಮುಂಬರುವ ತಿಂಗಳುಗಳಲ್ಲಿ ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ ವಿಸ್ತರಿಸುತ್ತೇವೆ. AGI ಯ ಸುರಕ್ಷಿತ ಮತ್ತು ಸುಭದ್ರ ಅಭಿವೃದ್ಧಿ ಹಾಗೂ ನಿಯೋಜನೆಗಾಗಿ ವ್ಯವಸ್ಥೆಗಳನ್ನು ನಿರ್ಮಿಸಲು ನೆರವಾಗಲು ಬಯಸುವಿರಾ? ನಾವು⁠ ನೇಮಕಾತಿ ಮಾಡುತ್ತಿದ್ದೇವೆ⁠.